ಪಶ್ಚಿಮ ಯುರೋಪ್ ನ ಭೀಕರ ಪ್ರವಾಹಕ್ಕೆ ಕನಿಷ್ಟ 188 ಬಲಿ

Update: 2021-07-19 17:22 GMT

 ಬರ್ಲಿನ್, ಜು.19: ಪಶ್ಚಿಮ ಯುರೋಪ್ನಲ್ಲಿ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 188ಕ್ಕೇರಿದ್ದು, ಇದರಲ್ಲಿ ಜರ್ಮನಿಯಲ್ಲೇ ಕನಿಷ್ಟ 157 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಜರ್ಮನಿಯಲ್ಲಿ ಇತ್ತೀಚಿನ ವರ್ಷಗಳಲ್ಲೇ ದಾಖಲೆ ಮಟ್ಟದಲ್ಲಿ ಮಳೆ ಸುರಿದಿದ್ದು ಬವಾರಿಯಾ ಜಿಲ್ಲೆ ಪ್ರಾಕೃತಿಕ ವಿಕೋಪದಿಂದ ತತ್ತರಿಸಿ ಹೋಗಿದೆ. ದೇಶದ ಹಲವೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜರ್ಮನಿಯ ಛಾನ್ಸೆಲರ್ ಆ್ಯಂಜೆಲಾ ಮಾರ್ಕೆಲ್ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತಕ್ಷಣ ಆರ್ಥಿಕ ನೆರವು ಒದಗಿಸುವ ಭರವಸೆ ನೀಡಿದ್ದಾರೆ. ಇಲ್ಲಿನ ಪರಿಸ್ಥಿತಿ ಕಂಡು ಇದು ಭಯಾನಕ ಎಂದಷ್ಟೇ ಹೇಳಲು ನನಗೆ ಸಾಧ್ಯವಾಗುತ್ತಿದೆ. ಹವಾಮಾನ ಬದಲಾವಣೆಯಿಂದ ಆಗುವ ಪರಿಣಾಮಗಳನ್ನು ಎದುರಿಸುವ ಕ್ರಮಗಳ ಬಗ್ಗೆ ಸರಕಾರಗಳು ಶೀಘ್ರ ಮತ್ತು ಉತ್ತಮ ಕ್ರಮಗಳನ್ನು ಕೈಗೊಳ್ಳೇಕಿದೆ ಎಂದು ಮಾರ್ಕೆಲ್ ಹೇಳಿದರು.
  
ಜರ್ಮನಿಯ ಬವಾರಿಯಾ ಜಿಲ್ಲೆಯಲ್ಲಿ ರವಿವಾರ ಹಠಾತ್ ಪ್ರವಾಹ ಸ್ಥಿತಿ ನೆಲೆಸಿದ್ದು ರಸ್ತೆಗಳು ನದಿಯಾಗಿ ಬದಲಾದವು. ರಸ್ತೆಯ ಪಕ್ಕ ನಿಲ್ಲಿಸಿದ್ದ ವಾಹನಗಳು ದೋಣಿಯಂತೆ ನೀರಿನಲ್ಲಿ ತೇಲಿಹೋದವು. ಬರ್ಚ್ಟೆಸ್ಗಾಡೆನರ್ ಲ್ಯಾಂಡ್ ಜಿಲ್ಲೆಯಲ್ಲಿ ಆಳೆತ್ತರದ ಕೆಸರಿನ ರಾಶಿ ಸೇರಿಕೊಂಡಿದ್ದು ಅದರೊಳಗೆ ವಾಹನಗಳು ಸಿಲುಕಿದವು. ಸ್ಥಳಕ್ಕೆ ನೂರಾರು ಸಿಬಂದಿ ತೆರಳಿದ್ದು ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. 

ಈ ಪರಿಸ್ಥಿತಿಯನ್ನು ನಾವು ಊಹಿಸಿರದ ಕಾರಣ ಪೂರ್ವಸಿದ್ಧತೆ ಮಾಡಿಕೊಂಡಿರಲಿಲ್ಲ ಎಂದು ಜಿಲ್ಲೆಯ ಅಧಿಕಾರಿ ಬರ್ನಾರ್ಡ್ ಕೆರ್ನ್ ಹೇಳಿದ್ದಾರೆ. ಅತೀ ಹೆಚ್ಚಿನ ಹಾನಿ ಸಂಭವಿಸಿದ ಅಹ್ರ್ವೆಲಿಯರ್ ಜಿಲ್ಲೆಯಲ್ಲಿ ಕನಿಷ್ಟ 110 ಮಂದಿ ಸಾವನ್ನಪ್ಪಿದ್ದಾರೆ. ಹಲವೆಡೆ ನೆರೆನೀರು ತುಂಬಿದ್ದು ನೆರೆ ಕಡಿಮೆಯಾದ ಬಳಿಕ ಇನ್ನೂ ಹಲವು ಮೃತದೇಹಗಳು ಪತ್ತೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬುಧವಾರದಿಂದ ಆರಂಭವಾಗಿರುವ ಪ್ರವಾಹದ ಪರಿಸ್ಥಿತಿಯಿಂದ ಜರ್ಮನಿ ಹಾಗೂ ಬೆಲ್ಜಿಯಂ ದೇಶಗಳ ಹಲವು ಪ್ರದೇಶಗಳಲ್ಲಿ ತೀವ್ರ ಹಾನಿಯಾಗಿದೆ. ಬೆಲ್ಜಿಯಂನಲ್ಲಿ ಕನಿಷ್ಟ 31 ಮಂದಿ ಮೃತರಾಗಿರುವುದಾಗಿ ವರದಿಯಾಗಿದೆ.

ಧ್ವಂಸಗೊಂಡಿರುವ ಮನೆಗಳು, ರಸ್ತೆ, ಸೇತುವೆಗಳ ಪುನನಿರ್ಮಾಣ ಕಾರ್ಯಕ್ಕೆ ತಕ್ಷಣದ ಪರಿಹಾರ ಕ್ರಮವಾಗಿ 354 ಮಿಲಿಯನ್ ಡಾಲರ್ ನೆರವು ಒದಗಿಸುವುದಾಗಿ ಜರ್ಮನ್ ವಿತ್ತಸಚಿವ ಒಲಫ್ ಶಾಝ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ನಷ್ಟದ ಪ್ರಮಾಣ ಅತ್ಯಧಿಕವಾಗಿದೆ. ಮನೆ, ಆಸ್ತಿಪಾಸ್ತಿ, ಅಂಗಡಿ, ವ್ಯವಹಾರಗಳನ್ನು ಕಳೆದುಕೊಂಡವರು ತಾವೇ ಹೊರೆಯನ್ನು ಹೊರಲಾಗದು ಎಂಬುದು ಸರಕಾರಕ್ಕೆ ತಿಳಿದಿದೆ . ನೆರೆಯಿಂದ ವ್ಯವಹಾರದ ಮೇಲಾಗಿರುವ ಪರಿಣಾಮಕ್ಕೆ ತಾತ್ಕಾಲಿಕ ನೆರವಿನ ರೂಪದಲ್ಲಿ 10,000 ಯುರೋ ಮೊತ್ತದ ನೆರವು ಒದಗಿಸಲಾಗುವುದು ಎಂದು ಜರ್ಮನಿಯ ಆರ್ಥಿಕ ಸಚಿವ ಪೀಟರ್ ಅಲ್ಟಮೈಯರ್ ಹೇಳಿದ್ದಾರೆ.

ಈ ಮಧ್ಯೆ, ಮುಂದಿನ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಜರ್ಮನಿಯ ಸಾರ್ವತ್ರಿಕ ಚುನಾವಣೆಯಲ್ಲಿ ಮಾರ್ಕೆಲ್ ಎದುರಾಳಿಯಾಗಿರುವ ನಾಥ್ರ್ಹೀನ್-ವೆಸ್ಟ್ಫಾಲಿಯಾ ಪ್ರಾಂತ್ಯದ ಪ್ರಧಾನಿ ಆರ್ಮಿನ್ ಲ್ಯಾಷೆಟ್ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಜರ್ಮನ್ ಅಧ್ಯಕ್ಷ ಫ್ರ್ಯಾಂಕ್ ವಾಲ್ಟರ್ ಸ್ಟೀನ್ಮೆಯಿರ್ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡುತ್ತಿದ್ದಾಗ ಅವರ ಹಿಂದೆ ನಿಂತಿದ್ದ ಲ್ಯಾಷೆಟ್ ನೆಗಾಡುತ್ತಿರುವ ವೀಡಿಯೊ ವೈರಲ್ ಆಗಿತ್ತು. ಈ ಬಗ್ಗೆ ಲ್ಯಾಷೆಟ್ ಕ್ಷಮೆ ಯಾಚಿಸಿದ್ದಾರೆ.
ಬೆಲ್ಜಿಯಂನಲ್ಲಿ ಭೀಕರ ಪ್ರವಾಹದಿಂದ ಕನಿಷ್ಟ 31 ಮಂದಿ ಸಾವಿಗೀಡಾಗಿದ್ದು 163 ಮಂದಿ ನಾಪತ್ತೆಯಾಗಿದ್ದಾರೆ. ಮಂಗಳವಾರ ರಾಷ್ಟ್ರೀಯ ಶೋಕಾಚರಣೆ ಹಮ್ಮಿಕೊಳ್ಳಲಾಗಿದೆ. ಸುಮಾರು 3,70,000 ಮನೆಗಳ ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಿದ್ದು ಕುಡಿಯುವ ನೀರಿನ ವ್ಯವಸ್ಥೆಗೂ ಹಾನಿಯಾಗಿದೆ. ಅದೃಷ್ಟವಶಾತ್ ಮಳೆಯ ಬಿರುಸು ತಗ್ಗಿದ್ದು ನೆರೆನೀರು ಇಳಿಯುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News