ಪಾಕಿಸ್ತಾನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧಾರ: ಅಫ್ಘಾನಿಸ್ತಾನ

Update: 2021-07-19 18:35 GMT

ಕಾಬೂಲ್ (ಅಫ್ಘಾನಿಸ್ತಾನ), ಜು. 19: ಭದ್ರತಾ ಬೆದರಿಕೆಗಳ ಹಿನ್ನೆಲೆಯಲ್ಲಿ ತನ್ನ ಪಾಕಿಸ್ತಾನ ರಾಯಭಾರಿ ಮತ್ತು ಆ ದೇಶದಲ್ಲಿರುವ ಇತರ ರಾಜತಾಂತ್ರಿಕರನ್ನು ವಾಪಸ ಕರೆಸಿಕೊಳ್ಳೂವುದಾಗಿ ಅಫ್ಗಾನಿಸ್ತಾನ ರವಿವಾರ ಹೇಳಿದೆ. 

ಪಾಕಿಸ್ತಾನದಲ್ಲಿರುವ ಅಫ್ಘಾನಿಸ್ತಾನದ ರಾಯಭಾರಿಯ ಮಗಳನ್ನು ಇಸ್ಲಾಮಾಬಾದ್ನಲ್ಲಿ ಇತ್ತೀಚೆಗೆ ದುಷ್ಕರ್ಮಿಗಳು ಅಪಹರಿಸಿ ಬಿಡುಗಡೆಗೊಳಿಸಿದ ಘಟನೆಯ ಬಳಿಕ ಈ ಬೆಳವಣಿಗೆ ನಡೆದಿದೆ.

ಈ ಅಪಹರಣ ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲವಾದರೂ, ಅಫ್ಘಾನ್ ರಾಯಭಾರಿಯ ಮಗಳು ಸಿಲ್ಸಿಲಾ ಅಲಿಖಿಲ್ ರನ್ನು ದುಷ್ಕರ್ಮಿಗಳು ಅಪಹರಿಸಿ, ಚಿತ್ರಹಿಂಸೆ ನೀಡಿ ಕೆಲವು ಗಂಟೆಗಳ ಬಳಿಕ ಬಿಡುಗಡೆ ಮಾಡಿದ್ದಾರೆ ಎಂದು ಅಫ್ಘಾನಿಸ್ತಾನದ ವಿದೇಶ ಸಚಿವಾಲಯ ತಿಳಿಸಿದೆ.
 
ಪಾಕಿಸ್ತಾನದಲ್ಲಿರುವ ಅಫ್ಘಾನಿಸ್ತಾನದ ರಾಯಭಾರಿಯ ಮಗಳ ಅಪಹರಣದ ಬಳಿಕ, ಆ ದೇಶದಲ್ಲಿ ಭದ್ರತಾ ಬೆದರಿಕೆ ತಿಳಿಗೊಳ್ಳುವವರೆಗೆ ಅಫ್ಘಾನಿಸ್ತಾನದ ನಾಯಕತ್ವವು ಆ ದೇಶದಲ್ಲಿರುವ ಅಫ್ಘಾನ್ ರಾಯಭಾರಿ ಮತ್ತು ಇತರ ಹಿರಿಯ ರಾಜತಾಂತ್ರಿಕರನ್ನು ಕಾಬೂಲ್ಗೆ ವಾಪಾಸ್ ಕರೆಸಿಕೊಂಡಿದೆಎಂದು ರವಿವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ವಿದೇಶ ಸಚಿವಾಲಯ ತಿಳಿಸಿದೆ.

ಅದೇ ವೇಳೆ, ರಾಯಭಾರಿಯ ಮಗಳನ್ನು ಅಪಹರಿಸಿದವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸುವಂತೆಯೂ ಅದು ಪಾಕಿಸ್ತಾನ ಸರಕಾರವನ್ನು ಒತ್ತಾಯಿಸಿದೆ.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ತನ್ನ ಮನೆಗೆ ಹೋಗುತ್ತಿದ್ದ ಸಿಲ್ಸಿಲಾ ಅಲಿಖಿಲ್ ರನ್ನು ಅಪಹರಿಸಲಾಗಿತ್ತು ಎಂದು ಸಚಿವಾಲಯ ಶನಿವಾರ ಹೇಳಿತ್ತು.
 
ಅಫ್ಘಾನಿಸ್ತಾನದ ರಾಯಭಾರಿಯ ಮಗಳ ಅಪಹರಣ ಮತ್ತು ಚಿತ್ರಹಿಂಸೆಯು ನಮ್ಮ ದೇಶದ ಅಂತಃಸಾಕ್ಷಿಯನ್ನು ಘಾಸಿಗೊಳಿಸಿದೆ. ನಮ್ಮ ದೇಶದ ಅಂತಃಸಾಕ್ಷಿಗೆ ಚಿತ್ರಹಿಂಸೆ ನೀಡಲಾಗಿದೆಎಂದು ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾ ಸಾಲಿಹ್ ಟ್ವಿಟರ್ನಲ್ಲಿ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ನೆಲೆಸಿರುವ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಅಫ್ಘಾನಿಸ್ತಾನದ ನಿಯೋಗವೊಂದು ಆ ದೇಶಕ್ಕೆ ಭೇಟಿ ನೀಡಲಿದೆ. ಆ ಬಳಿಕ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅಫ್ಘಾನಿಸ್ತಾನದ ವಿದೇಶ ಸಚಿವಾಲಯ ಹೇಳಿದೆ.


ಆಕ್ರಮಣ ನಿಲ್ಲಿಸಿ: ತಾಲಿಬಾನ್ ಗೆ ರಾಯಭಾರ ಕಚೇರಿಗಳ ಮನವಿ

ದಾಳಿಯನ್ನು ನಿಲ್ಲಿಸುವಂತೆ ಅಫ್ಘಾನಿಸ್ತಾನದಲ್ಲಿರುವ 15 ರಾಯಭಾರ ಕಚೇರಿಗಳು ಮತ್ತು ನ್ಯಾಟೋ ಪ್ರತಿನಿಧಿ ಸೋಮವಾರ ತಾಲಿಬಾನನ್ನು ಒತ್ತಾಯಿಸಿದ್ದಾರೆ. ದೋಹಾದಲ್ಲಿ ನಡೆದ ಶಾಂತಿ ಮಾತುಕತೆಯಲ್ಲಿ ಯುದ್ಧವಿರಾಮ ಒಪ್ಪಂದಕ್ಕೆ ಬರುವಲ್ಲಿ ಅಫ್ಘಾನ್ ಸರಕಾರ ಮತ್ತು ತಾಲಿಬಾನ್ ಉಗ್ರರು ವಿಫಲವಾದ ಗಂಟೆಗಳ ಬಳಿಕ ಅವು ಈ ಮನವಿಯನ್ನು ಮಾಡಿವೆ.

ಅಫ್ಘಾನ್ ನಾಯಕರ ನಿಯೋಗವೊಂದು ವಾರಾಂತ್ಯದಲ್ಲಿ ಖತರ್ ರಾಜಧಾನಿ ದೋಹಾದಲ್ಲಿ ತಾಲಿಬಾನ್ನ ರಾಜಕೀಯ ನಾಯಕತ್ವವನ್ನು ಭೇಟಿ ಮಾಡಿತು. ಆದರೆ, ತಾಲಿಬಾನ್ ರವಿವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ, ಅಫ್ಘಾನಿಸ್ತಾನದಲ್ಲಿನ ಹಿಂಸೆಯನ್ನು ನಿಲ್ಲಿಸುವ ಯಾವುದೇ ಪ್ರಸ್ತಾವವನ್ನು ಮಾಡಿಲ್ಲ.
 
ಈ ಈದ್ ಅಲ್-ಅದ್ಹಾ ಸಂದರ್ಭದಲ್ಲಿ, ಒಳ್ಳೆಯ ಉದೇಶಕ್ಕಾಗಿ ತಾಲಿಬಾನ್ ತನ್ನ ಶಸ್ತ್ರಾಸ್ತ್ರವನ್ನು ಕೆಳಗಿಡಬೇಕು ಹಾಗೂ ಶಾಂತಿ ಪ್ರಕ್ರಿಯೆಗೆ ತಾನು ಹೊಂದಿರುವ ಬದ್ದತೆಯನ್ನು ಜಗತ್ತಿಗೆ ತೋರಿಸಬೇಕುಎಂಬ ಹೇಳಿಕೆ 15 ರಾಯಭಾರ ಕಚೇರಿಗಳು ಮತ್ತು ನ್ಯಾಟೊ ಪ್ರತಿನಿಧಿಯಿಂದ ಹೊರಟಿದೆ.

ಹೇಳಿಕೆಗೆ ಆಸ್ಟ್ರೇಲಿಯ, ಕೆನಡ, ಝೆಕ್ ರಿಪಬ್ಲಿಕ್, ಡೆನ್ಮಾರ್ಕ್, ಯುರೋಪಿಯನ್ ಒಕ್ಕೂಟ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಕೊರಿಯ, ನೆದರ್ಲ್ಯಾಂಡ್ಸ್, ಸ್ಪೇನ್, ಸ್ವೀಡನ್, ಬ್ರಿಟನ್ ಮತ್ತು ಅಮೆರಿಕ ಹಾಗೂ ನ್ಯಾಟೊ ಅನುಮೋದನೆ ನೀಡಿವೆ.


ಅಫ್ಘಾನ್ ನಿರ್ಧಾರ ದುರದೃಷ್ಟಕರ, ವಿಷಾದನೀಯ: ಪಾಕ್

ಪಾಕಿಸ್ತಾನದಿಂದ ತನ್ನ ರಾಯಭಾರಿ ಮತ್ತು ಹಿರಿಯ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳುವ ಅಫ್ಘಾನಿಸ್ತಾನದ ನಿರ್ಧಾರವು ದುರದೃಷ್ಟಕರ ಮತ್ತು ವಿಷಾದನೀಯ ಎಂದು ಪಾಕಿಸ್ತಾನ ಹೇಳಿದೆ ಹಾಗೂ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಅದು ಅಫ್ಘಾನಿಸ್ತಾನವನ್ನು ಒತ್ತಾಯಿಸಿದೆ.

ಅಫ್ಘಾನ್ ರಾಯಭಾರಿ ನಜೀಬುಲ್ಲಾ ಅಲಿಖಿಲ್ರ 26 ವರ್ಷದ ಮಗಳ ಅಪಹರಣ ಮತ್ತು ಹಲ್ಲೆಯ ಬಗ್ಗೆ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಸೂಚನೆಗಳಂತೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನದ ವಿದೇಶ ಕಚೇರಿ ರವಿವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪಾಕಿಸ್ತಾನದಲ್ಲಿರುವ ಅಫ್ಘಾನಿಸ್ತಾನದ ರಾಯಭಾರಿ, ಅವರ ಕುಟುಂಬ ಮತ್ತು ರಾಯಭಾರ ಕಚೇರಿ ಮತ್ತು ಕೌನ್ಸುಲೇಟ್ಗಳ ಸಿಬ್ಬಂದಿಗೆ ನೀಡಲಾಗುತ್ತಿರುವ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ ಎಂದು ಅದು ಹೇಳಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News