ಪೆಗಾಸಸ್ ಬೇಹುಗಾರಿಕೆ: ಫ್ರಾನ್ಸ್ ಪ್ರಾಸಿಕ್ಯೂಟರ್ಗಳಿಂದ ತನಿಖೆ ಆರಂಭ

Update: 2021-07-20 18:30 GMT

ಪ್ಯಾರಿಸ್, ಜು. 20: ಫ್ರಾನ್ಸ್ ನ ಹಲವು ಪತ್ರಕರ್ತರ ಮೇಲೆ ಬೇಹುಗಾರಿಕೆ ನಡೆಸಲು ಮೊರೊಕ್ಕೊ ದೇಶದ ಗುಪ್ತಚರ ಸಂಸ್ಥೆಗಳು ಇಸ್ರೇಲ್ನ ಕಳ್ಳಸಾಫ್ಟ್ವೇರ್ ಪೆಗಾಸಸನ್ನು ಬಳಿಸಿವೆ ಎಂಬ ಆರೋಪಗಳ ಬಗ್ಗೆ ನಾವು ತನಿಖೆಯೊಂದನ್ನು ಆರಂಭಿಸಿದ್ದೇವೆ ಎಂದು ಫ್ರಾನ್ಸ್ ನ ಪ್ರಾಸಿಕ್ಯೂಟರ್ಗಳು ಮಂಗಳವಾರ ಹೇಳಿದ್ದಾರೆ.

ವ್ಯಕ್ತಿಯ ಖಾಸಗಿತನವನ್ನು ಉಲ್ಲಂಘಿಸಲಾಗಿದೆಯೇ, ವೈಯಕ್ತಿಕ ಇಲೆಕ್ಟ್ರಾನಿಕ್ ಉಪಕರಣಗಳಿಗೆ ಅಕ್ರಮ ಪ್ರವೇಶ ಪಡೆಯಲಾಗಿದೆಯೇ ಹಾಗೂ ಇದರಲ್ಲಿ ಕ್ರಿಮಿನಲ್ ಉದ್ದೇಶ ಇದೆಯೇ ಎನ್ನುವುದೂ ಸೇರಿದಂತೆ 10 ವಿವಿಧ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ತನ್ನ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂದು ಆರೋಪಿಸಿ ತನಿಖಾ ವೆಬ್ಸೈಟ್ ‘ಮೀಡಿಯಾಪಾರ್ಟ್’ ಸೋಮವಾರ ದೂರು ಸಲ್ಲಿಸಿದೆ. ತನಿಖಾ ಪತ್ರಿಕೆ ‘ಲೆ ಕಾನಾರ್ಡ್ ಎನ್ಚೈನ್’ ಕೂಡ ದೂರು ಸಲ್ಲಿಸಲು ಸಿದ್ಧತೆಗಳನ್ನು ನಡೆಸಿದೆ. ಆದರೆ, ಈ ಆರೋಪಗಳನ್ನು ಮೊರೊಕ್ಕೊ ನಿರಾಕರಿಸಿದೆ.

ಸೋರಿಕೆಯಾಗಿರುವ 50,000 ಫೋನ್ ನಂಬರ್ಗಳ ಪಟ್ಟಿಯ ಆಧಾರದಲ್ಲಿ ‘ದ ವಾಶಿಂಗ್ಟನ್ ಪೋಸ್ಟ್’, ‘ದ ಗಾರ್ಡಿಯನ್’, ‘ಲೆ ಮೋಂಡ್’ ಮತ್ತು ಇತರ ಮಾಧ್ಯಮ ಸಂಸ್ಥೆಗಳು, ಎನ್ಎಸ್ಒ ಗ್ರೂಪ್ನ ಕಳ್ಳ ಸಾಫ್ಟ್ವೇರ್ ನ ಬಳಕೆಯ ಬಗ್ಗೆ ಜಂಟಿ ತನಿಖೆಯನ್ನು ನಡೆಸಿವೆ ಹಾಗೂ ಈ ಕಳ್ಳ ಸಾಫ್ಟ್ವೇರ್ ಬಳಸಿ ಜಗತ್ತಿನಾದ್ಯಂತ ಮಾಡಲಾಗಿರುವ ಬೇಹುಗಾರಿಕೆಯು ಈ ಹಿಂದೆ ಭಾವಿಸಿರುವುದಕ್ಕಿಂತಲೂ ಅಗಾಧವಾಗಿವೆ ಎಂಬ ನಿರ್ಧಾರಕ್ಕೆ ಸೋಮವಾರ ಬಂದಿವೆ.

ವೆಬ್ಸೈಟ್ ನ ಸ್ಥಾಪಕ ಮತ್ತು ಓರ್ವ ಪತ್ರಕರ್ತನ ಫೋನ್ಗಳನ್ನು ಮೊರೊಕ್ಕೊದ ಗುಪ್ತಚರ ಸಂಸ್ಥೆಗಳು ಕದ್ದು ನೋಡಿವೆ ಎಂದು ಮೀಡಿಯಾಪಾರ್ಟ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News