ಬ್ರಿಟನ್‌ನಲ್ಲಿ ಹೆಚ್ಚುತ್ತಿರುವ ಸೋಂಕು ಪ್ರಕರಣ: ಆಹಾರ ವಸ್ತುಗಳ ಕೊರತೆ ಸಾಧ್ಯತೆ; ದಿನಸಿ ವ್ಯಾಪಾರಿಗಳ ಎಚ್ಚರಿಕೆ

Update: 2021-07-22 17:10 GMT

ಲಂಡನ್, ಜು.22: ಈ ವಾರದ ಆರಂಭದಲ್ಲಿ ಸರಕಾರ ಕೋವಿಡ್ ಸೋಂಕಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಸೋಂಕಿನ ಪ್ರಕರಣ ಹೆಚ್ಚುತ್ತಿದ್ದು ಉದ್ಯೋಗಿಗಳು ಮನೆಯಲ್ಲಿಯೇ ಇರಲು ಬಯಸುತ್ತಿರುವ ಕಾರಣ ದೇಶದಲ್ಲಿ ಆಹಾರ ವಸ್ತುಗಳ ಕೊರತೆ ಸಂಭವಿಸಬಹುದು ಎಂದು ಬ್ರಿಟನ್‌ನ ಪ್ರಮುಖ ಸೂಪರ್‌ ಮಾರ್ಕೆಟ್‌ಗಳು ಹಾಗೂ ಪೂರೈಕೆದಾರರು ಎಚ್ಚರಿಸಿದ್ದಾರೆ.

 ಬ್ರಿಟನ್‌ನಲ್ಲಿ ಜಾರಿಯಲ್ಲಿರುವ ಪಿಂಗ್ಡೆಮಿಕ್ (ವಿಷಯವನ್ನು ಮತ್ತೆ ಮತ್ತೆ ನೆನಪಿಸಲು ಸಂಪರ್ಕಿಸುವ ಪ್ರಕ್ರಿಯೆ) ಎಂದು ಅಡ್ಡಹೆಸರಿನಿಂದ ಕರೆಯಲಾಗುತ್ತಿರುವ , ಆ್ಯಪ್ ಮೂಲಕ ಕೋವಿಡ್ ಸೋಂಕಿತರ ಸಂಪರ್ಕ ಪತ್ತೆ ಹಚ್ಚುವ ನಿಯಮ ಜಾರಿಯಾದ ಬಳಿಕ ಮಿಲಿಯಾಂತರ ಉದ್ಯೋಗಿಗಳು ಹಾಗೂ ಶಾಲಾಮಕ್ಕಳು ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿರಲು ಆದ್ಯತೆ ನೀಡುತ್ತಿದ್ದಾರೆ. ಇದರಿಂದ ದೇಶದ ಬಹುತೇಕ ಸೂಪರ್‌ಮಾರ್ಕೆಟ್‌ಗಳು ಹಾಗೂ ಶಾಪಿಂಗ್ ಮಾಲ್‌ಗಳಲ್ಲಿ ನೌಕರರ ಕೊರತೆ ಕಾಡುತ್ತಿದ್ದು ಆಹಾರ ಪೂರೈಕೆ, ಹಂಚಿಕೆ ಸರಪಳಿ ಅಸ್ತವ್ಯಸ್ತವಾಗಿದೆ . ಕೆಲವು ಅಂಗಡಿಗಳನ್ನು ಮುಚ್ಚುವ ಪರಿಸ್ಥಿತಿಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೋಂಕಿನ ಸಮಸ್ಯೆ ಆರಂಭವಾದಂದಿನಿಂದಲೂ ನಮ್ಮ ಸಂಸ್ಥೆ ಬಾಗಿಲು ಮುಚ್ಚಿ ರಲಿಲ್ಲ. ಆದರೆ ಈಗ ಬಾಗಿಲು ಮುಚ್ಚುವ ಅನಿವಾರ್ಯತೆಯಿದೆ ಎಂದು ಆಹಾರ ವಸ್ತುಗಳ ಸರಣಿ ಮಾರಾಟ ಸಂಸ್ಥೆಯ ಆಡಳಿತ ನಿರ್ದೇಶಕ ರಿಚರ್ಡ್ ವಾಕರ್ ಹೇಳಿದ್ದಾರೆ. ಬ್ರೆಕ್ಸಿಟ್‌ನಿಂದಾಗಿ ಬ್ರಿಟನ್‌ನಲ್ಲಿ ಈಗಾಗಲೇ ಲಾರಿ ಡ್ರೈವರ್‌ಗಳ ಕೊರತೆಯಿದೆ. ಈಗ ಹೊಸ ನಿಯಮ ಈ ಸಮಸ್ಯೆಯನ್ನು ವ್ಯಾಪಕವಾಗಿಸಿದೆ ಎಂದು ರಸ್ತೆ ಸರಕುಸಾಗಣಿಕೆದಾರರ ಸಂಘಟನೆಯ ಆಡಳಿತ ನಿರ್ದೇಶಕ ರಾಡ್ ಮೆಕಿಂಝೆ ಹೇಳಿದ್ದಾರೆ.

ಕಡ್ಡಾಯ ಮಾಸ್ಕ್ ಧಾರಣೆ, ಸುರಕ್ಷಿತ ಅಂತರ ಪಾಲನೆ ನಿಯಮ ಸಹಿತ ಹಲವು ನಿರ್ಬಂಧಗಳನ್ನು ಬ್ರಿಟನ್ ಸರಕಾರ ಸೋಮವಾರ ಸಡಿಲಿಸಿದೆ. ಈ ಮಧ್ಯೆ, ಕೊರೋನ ಸೋಂಕಿನ ಲಕ್ಷಣ ಕಂಡುಬಂದು ಮನೆಯಲ್ಲೇ ಕ್ವಾರಂಟೈನ್‌ಗೆ ಒಳಪಡುವವರ ಸಂಖ್ಯೆ ಹೆಚ್ಚುತ್ತಿದ್ದು ವಿತ್ತಸಚಿವ ರಿಷಿ ಸುನಾಕ್, ಆರೋಗ್ಯ ಇಲಾಖೆಯ ಕಾರ್ಯದರ್ಶಿ ಸಾಜಿದ್ ಜಾವಿದ್ , ಲೇಬರ್ ಪಕ್ಷದ ಮುಖಂಡ ಕೀರ್ ಸ್ಟಾರ್ಮರ್ ಈ ಪಟ್ಟಿಯಲ್ಲಿರುವ ಪ್ರಮುಖರಾಗಿದ್ದಾರೆ ಎಂದು ಸರಕಾರದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News