ಒಮಾನ್‌ನಲ್ಲಿ ಇರಾನ್‌ನ ತೈಲ ಸಂಗ್ರಹಾಗಾರಕ್ಕೆ ಚಾಲನೆ

Update: 2021-07-22 17:38 GMT

ಟೆಹ್ರಾನ್, ಜು.22: ಗಲ್ಫ್ ಪ್ರದೇಶದಲ್ಲಿ ಇರಾನ್‌ನ ಪ್ರಪ್ರಥಮ ತೈಲ ಸಂಗ್ರಹಾಗಾರವನ್ನು ಒಮಾನ್‌ನಲ್ಲಿ ಆರಂಭಿಸಲಾಗಿದೆ ಎಂದು ಇರಾನ್‌ನ ನಿರ್ಗಮಿತ ಅಧ್ಯಕ್ಷ ಹಸನ್ ರೂಹಾನಿ ಘೋಷಿಸಿದ್ದಾರೆ. ಇದೊಂದು ವ್ಯೂಹಾತ್ಮಕ ನಡೆಯಾಗಿದ್ದು ದೇಶದ ತೈಲ ರಫ್ತು ಪ್ರಕ್ರಿಯೆಯ ಮುಂದುವರಿಕೆಗೆ ನೆರವಾಗಲಿದೆ ಎಂದವರು ಹೇಳಿದ್ದಾರೆ.

ಇದರಿಂದ ಇರಾನ್ ತನ್ನ ತೈಲ ರಫ್ತು ಪ್ರಕ್ರಿಯೆಗೆ ಹೋರ್ಮಝ್ ಜಲಮಾರ್ಗವನ್ನು ಅವಲಂಬಿಸುವ ಅನಿವಾರ್ಯತೆ ತಪ್ಪಿದಂತಾಗಿದೆ.

 ಇರಾನ್ ದೇಶದ ಇತಿಹಾಸದಲ್ಲಿ ಇವತ್ತು ಚರಿತ್ರಾರ್ಹ ದಿನವಾಗಿದೆ. ಈ ಹಿಂದೆ ಏನಾದರೂ ಸಮಸ್ಯೆಯಾದರೆ ನಮಗೆ ತೈಲ ಸಾಗಿಸುವ ಮಾರ್ಗಕ್ಕೆ ಅಡ್ಡಿಯಾಗುವ ಪರಿಸ್ಥಿತಿಯಿತ್ತು. ಇವತ್ತು 100 ಟನ್ ತೈಲ ಹೊತ್ತ ಪ್ರಥಮ ಹಡಗು ಹೋರ್ಮಝ್ ಜಲಮಾರ್ಗದ ಬದಲು ಬೇರೆ ಮಾರ್ಗದ ಮೂಲಕ ರವಾನೆಯಾಗಿದೆ. ಅಮೆರಿಕದ ನಿರ್ಬಂಧದ ವೈಫಲ್ಯವನ್ನು ಇದು ತೋರಿಸುತ್ತದೆ. ‘ಬಂದರ್-ಎ- ಜಸ್ಕ್’ ಬಂದರಿನ ಮೂಲಕ ಪ್ರತೀ ದಿನ 1 ಮಿಲಿಯನ್ ಬ್ಯಾರೆಲ್ ತೈಲ ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದು ಟಿವಿ ವಾಹಿನಿಯ ಮೂಲಕ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ರೂಹಾನಿ ಹೇಳಿದ್ದಾರೆ. ಹೊಸ ಟರ್ಮಿನಲ್‌ಗೆ ಕಚ್ಛಾತೈಲ ಸಾಗಿಸಲು 1,000 ಕಿ.ಮೀ ಉದ್ದದ ಪೈಪ್‌ಲೈನ್ ಕೂಡಾ ಆರಂಭಿಸಲಾಗಿದೆ. ಹೋರ್ಮಝ್ ಜಲಮಾರ್ಗ ಗಲ್ಫ್ ದೇಶಕ್ಕೆ ಸಂಪರ್ಕ ಸಾಧಿಸುವ ಇಕ್ಕಟ್ಟಿನ ಜಲಸಂಧಿಯಾಗಿದ್ದು ಏಶ್ಯಾ, ಯುರೋಪ್, ಉತ್ತರ ಅಮೆರಿಕ ಹಾಗೂ ಅದರಿಂದಾಚೆಗಿನ ದೇಶಗಳಿಗೆ ಮಧ್ಯಪ್ರಾಚ್ಯ ದೇಶಗಳಿಂದ ರಫ್ತಾಗುವ ಒಟ್ಟು ತೈಲಪ್ರಮಾಣದ ಐದನೇ ಒಂದು ಭಾಗದಷ್ಟು ತೈಲೋತ್ಪನ್ನ ಇದರ ಮೂಲಕ ರವಾನೆಯಾಗುತ್ತದೆ.

 ಇಲ್ಲಿಯ ಸಮುದ್ರಭಾಗದಲ್ಲಿ ಇರಾನ್‌ನ ರೆವೊಲ್ಯುಷನರಿ ಗಾರ್ಡ್ ಪಡೆ ಹಾಗೂ ಅಮೆರಿಕದ ಸೇನೆಯ ಮಧ್ಯೆ ಆಗಾಗ ತಿಕ್ಕಾಟ, ಘರ್ಷಣೆ ನಡೆಯುತ್ತಿರುತ್ತದೆ. ಜೊತೆಗೆ, ಬದ್ಧವೈರಿಗಳಾದ ಇಸ್ರೇಲ್-ಇರಾನ್‌ಗಳ ನಡುವೆಯೂ ಇಲ್ಲಿ ಘರ್ಷಣೆ ನಡೆಯುತ್ತಿರುತ್ತದೆ. ಕಳೆದ ಫೆಬ್ರವರಿಯಲ್ಲಿ ಗಲ್ಫ್ ಆಫ್ ಒಮಾನ್‌ನಲ್ಲಿ ಇಸ್ರೇಲ್‌ನ ಹಡಗುಗಳ ಮೇಲೆ ದಾಳಿ ನಡೆದಿದ್ದು ಇದಕ್ಕೆ ಇರಾನ್ ಕಾರಣ ಎಂದು ಇಸ್ರೇಲ್ ದೂರಿದೆ. ಜೂನ್‌ನಲ್ಲಿ ಇರಾನ್‌ನ ಬೃಹತ್ ಯುದ್ಧನೌಕೆ ಬೆಂಕಿಹತ್ತಿಕೊಂಡು ಮುಳುಗಿದ ಘಟನೆಯೂ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News