ನಾಗರಿಕ ಸಮಾಜ, ಟೀಕಾಕಾರರ ವಿರುದ್ಧ ಬೇಹುಗಾರಿಕೆ ತಂತ್ರಜ್ಞಾನ ಬಳಕೆ ತಪ್ಪು: ಅಮೆರಿಕ

Update: 2021-07-24 16:57 GMT

ವಾಶಿಂಗ್ಟನ್, ಜು. 24: ನಾಗರಿಕ ಸಮಾಜ, ಸರಕಾರದ ಟೀಕಾಕಾರರು ಮತ್ತು ಪತ್ರಕರ್ತರ ವಿರುದ್ಧ ಬೇಹುಗಾರಿಕೆ ತಂತ್ರಜ್ಞಾನವನ್ನು ಬಳಸುವುದನ್ನು ವಿರೋಧಿಸುವುದಾಗಿ ಅಮೆರಿಕ ಹೇಳಿದೆ. ಅದೇ ವೇಳೆ, ಭಾರತದಲ್ಲಿನ ಪೆಗಾಸಸ್ ವಿವಾದದ ಬಗ್ಗೆ ತನಗೆ ನಿರ್ದಿಷ್ಟ ಮಾಹಿತಿಯಿಲ್ಲ ಎಂದು ಅದು ಹೇಳಿದೆ.

‘‘ಈ ಬಗೆಯ ತಂತ್ರಜ್ಞಾನವನ್ನು ನಾಗರಿಕ ಸಮಾಜ ಅಥವಾ ಸರಕಾರದ ಟೀಕಾಕಾರರು ಅಥವ ಪತ್ರಕರ್ತರು ಅಥವ ಇಂಥ ಯಾರದೇ ವಿರುದ್ಧ ನ್ಯಾಯಾಂಗೇತರ ವಿಧಾನದಲ್ಲಿ ಬಳಸುವುದು ಯಾವತ್ತೂ ಕಳವಳಕಾರಿ’’ ಎಂದು ದಕ್ಷಿಣ ಮತ್ತು ಮಧ್ಯ ಏಶ್ಯ ವ್ಯವಹಾರಗಳಿಗಾಗಿನ ಅಮೆರಿಕದ ಉಸ್ತುವಾರಿ ಸಹಾಯಕ ಕಾರ್ಯದರ್ಶಿ ಡೀನ್ ತಾಂಪ್ಸನ್ ವಾಶಿಂಗ್ಟನ್ ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಭಾರತದಲ್ಲಿ ಇಬ್ಬರು ಸಚಿವರು, 40ಕ್ಕೂ ಅಧಿಕ ಪತ್ರಕರ್ತರು, ಮೂವರು ಪ್ರತಿಪಕ್ಷ ನಾಯಕರು, ಓರ್ವ ಹಾಲಿ ನ್ಯಾಯಾಧೀಶ, ಹಲವಾರು ಉದ್ಯಮಿಗಳು ಮತ್ತು ಮಾನವಹಕ್ಕುಗಳ ಕಾರ್ಯಕರ್ತರು ಸೇರಿದಂತೆ 300ಕ್ಕೂ ಅಧಿಕ ಮಂದಿಯ ಮೊಬೈಲ್ ಫೋನ್ಗಳಿಗೆ ಇಸ್ರೇಲ್ನ ಪೆಗಾಸಸ್ ತಂತ್ರಜ್ಞಾನದ ಮೂಲಕ ಕನ್ನ ಹಾಕಲಾಗಿದೆ ಎಂದು ಅಂತರ್ರಾಷ್ಟ್ರೀಯ ಮಾಧ್ಯಮ ಒಕ್ಕೂಟ ಇತ್ತೀಚೆಗೆ ವರದಿ ಮಾಡಿದೆ.
‘‘ಭಾರತದ ಪ್ರಕರಣದ ಬಗ್ಗೆ ವಿಶೇಷ ಮಾಹಿತಿ ನನಗಿಲ್ಲ’’ ಎಂದು ಭಾರತಕ್ಕೆ ಸಂಬಂಧಿಸಿದ ವರದಿಗಳ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ತಾಂಪ್ಸನ್ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News