ಸೌದಿಯ ಹಿಮಾ ಶಿಲಾರೇಖಾಚಿತ್ರ ವಿಶ್ವಪಾರಂಪರಿಕ ತಾಣದ ಮಾನ್ಯತೆ

Update: 2021-07-25 17:38 GMT
photo: twitter/@ARCWH

ನ್ಯೂಯಾರ್ಕ್,ಜು.25: ಸೌದಿ ಆರೇಬಿಯದ ಪುರಾತನ ಶಿಲಾರೇಖಾ ಚಿತ್ರಗಳು, ಫ್ರಾನ್ಸ್ನ ಇತಿಹಾಸ ಪ್ರಸಿದ್ಧ 400 ವರ್ಷಗಳಷ್ಟು ಪುರಾತನವಾದ ದ್ವೀಪಸ್ತಂಭ ಹಾಗೂ ಯುರೋಪ್ನ ವಿವಿಧ ಜಲಚಿಲುಮೆಗಳಿಗೆ ಯುನೆಸ್ಕೊ ಶನಿವಾರ ಯುನೆಸ್ಕೊ ವಿಶ್ವಪಾರಂಪರಿಕ ತಾಣದ ಮಾನ್ಯತೆಯನ್ನು ನೀಡಿದೆ.

     ‌
ಸೌದಿ ಆರೇಬಿಯದ ಹಿಮಾ ಪ್ರದೇಶದ ಬಂಡೆಗಲ್ಲುಗಳಲ್ಲಿ ಬರೆಯಲಾದ ಪುರಾತನ ರೇಖಾಚಿತ್ರಗಳು ಶನಿವಾರ ಯನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆಯನ್ನು ಪಡೆದುಕೊಂಡಿವೆ. ಹಿಮಾದಲ್ಲಿರುವ 34ಕ್ಕೂ ಅಧಿಕ ಸ್ಥಳಗಳಲ್ಲಿ ಶಿಲಾರೇಖಾ ಚಿತ್ರಗಳಿವೆ. ಪುರಾತನ ಅರಬ್ ವ್ಯಾಪಾರಿಗಳು ಸಂಚರಿಸುವ ಪ್ರಮುಖ ವಾಣಿಜ್ಯ ಮಾರ್ಗ ಇದಾಗಿತ್ತು. ಹಿಮಾ ಶಿಲಾರೇಖಾಚಿತ್ರಗಳಿಗೆ ವಿಶ್ವಪಾರಂಪರಿಕ ಸ್ಥಾನಮಾನ ದೊರೆತಿರುವುದನ್ನು ಸೌದಿಯ ರಾಜಕುಮಾರ ಬದ್ರ್ ಬಿನ್ ಅಬುಲ್ಲಾ ಅವರು ಸ್ವಾಗತಿಸಿದ್ದಾರೆ. ಸೌದಿ ಆರೇಬಿಯವು ಸಮೃದ್ಧವಾದ ಪುರಾತನ ನಾಗರಿಕತೆಯನ್ನು ಹೊಂದಿದೆ. ಅವುಗಳನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನಗಳಿಗೆ ಫಲ ದೊರೆಯುತ್ತಿದೆಯೆಂದವರು ಹರ್ಷ ವ್ಯಕ್ತಪಡಿಸಿದ್ದಾರೆ.
     
ನೈಋತ್ಯ ಫ್ರಾನ್ಸ್ನ ಅಟ್ಲಾಂಟಿಕ್ ಸಾಗರದ ಬಂಡೆಯಲ್ಲಿ ನಿರ್ಮಿಸಲಾದ ಬೃಹತ್ ದ್ವೀಪಸ್ತಂಭವು ಫ್ರೆಂಚ್ಭಾಷೆಯಲ್ಲಿ ಕೊರ್ಡೊಯುವಾನ್ ಬಿಕಾನ್ ಎಂದು ಕರೆಯಲ್ಪಡುತ್ತಿದ್ದು, ‘ದ್ವೀಪಸ್ತಂಭಗಳ ರಾಜ’ನೆಂದೇ ಜಗದ್ವಿಖ್ಯಾತವಾಗಿದೆ. ಈ ದ್ವೀಪಸ್ತಂಭವನ್ನು 16ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.
   
400 ವರ್ಷಗಳಿಂದ ಭಾರೀ ಗಾಳಿ ಹಾಗೂ ಪ್ರಖರ ಬಿಸಿಲಿನ ಪ್ರತಿಕೂಲ ಹವಾಮಾನವನ್ನು ಎದುರಿಸಿ ಈ ದ್ವೀಪಸ್ತಂಭವು ಭದ್ರವಾಗಿದೆ ನಿಂತಿದೆಯೆಂದು ಯುನೆಸ್ಕೊದ ವಿಶ್ವ ಪಾರಂಪರಿಕ ಸಮಿತಿ ತಿಳಿಸಿದೆ. ನೌಕಾಯಾನದ ಸಂಕೇತ ನೀಡಿಕೆಯ ಮಹಾನ್ ನಿರ್ಮಾಣ ಇದಾಗಿದೆ ಎಂದು ಅದು ಬಣ್ಣಿಸಿದೆ. ಎಂಜಿನಿಯರ್ ಲೂಯಿಸ್ ದ ಫಾಕ್ಸ್ ಈ ದ್ವೀಪಸ್ತಂಭವನ್ನು ವಿನ್ಯಾಸಗೊಳಿಸಿದ್ದರು ಹಾಗೂ 18ನೇ ಶತಮಾನದಲ್ಲಿ ಜೋಸೆಫ್ ತೆಯೂಲೆರ್ ಅವರು ಅದನ್ನು ಮರುವಿನ್ಯಾಸಗೊಳಿಸಿದ್ದರು.
  
ಯುರೋಪ್ನ ವಿವಿಧ ಪ್ರಮುಖ ನಗರಗಳಲ್ಲಿರುವ ಪುರಾತನ ಖನಿಜಯುಕ್ತ ಜಲಗಳ ಚಿಲುಮೆ (ಸ್ಪಾ)ಗಳನ್ನು ವಿಶ್ವಪಾರಂಪರಿಕ ಪಟ್ಟಿಗೆ ಯುನೆಸ್ಕೊ ಸೇರ್ಪಡೆಗೊಳಿಸಿದೆ. ಆಸ್ಟ್ರೀಯದ ಬಾಡೆನ್ ಬಿ ವಿಯೆನ್, ಬೆಲ್ಜಿಯಂನ ಸ್ಪಾ, ಝೆಕ್ ರಿಪಬ್ಲಿಕ್ನಲ್ಲಿರುವ ಕರ್ಲೊವಿ ವ್ಯಾರಿ, ಫ್ರಾಂಟಿಸ್ಕೊವಿ ಹಾಗೂ ಮಾರಿಯಾನ್ಸ್ಕೆ ಲ್ಯಾಝ್ನೆ, ಫ್ರಾನ್ಸ್ನ ವಿಚಿ, ಜರ್ಮನಿಯ ಬ್ಯಾಡ್ ಎಮ್ಸ್, ಬ್ಯಾಡೆನ್-ಬ್ಯಾಡೆನ್ ಹಾಗೂ ಬ್ಯಾಡ್ ಕಿಸ್ಸಿನ್ಜೆನ್ , ಇಟಿಯ ಮೊಂಟೆಕ್ಯಾಟಿನಿ ಟೆರ್ಮೆ ಹಾಗೂ ಬ್ರಿಟನ್ನ ಬಾಥ್ ನಲ್ಲಿರುವ ಸ್ಪಾಗಳನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.

ಖನಿಜಯುಕ್ತವಾದ ಈ ಜಲಚಿಲುಮೆಗಳು ರೋಗನಿವಾರಕ ಅಂಶಗಳನ್ನು ಹೊಂದಿವೆಯೆಂದುಭಾವಿಸಿ ಪುರಾತನ ಯುರೋಪ್ನಲ್ಲಿ ಜನರು ಅವುಗಳಲ್ಲಿ ಸ್ನಾನ ಮಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News