ಪಿಓಕೆ ಶಾಸನಸಭೆ ಚುನಾವಣೆ: ತೆಹ್ರಿಕೆ ಇನ್ಸಾಫ್ ಗೆ ಸರಳ ಬಹುಮತ

Update: 2021-07-26 17:18 GMT
photo: twitter/@ImranKhanPTI

ಮುಝಫರಾಬಾದ್, ಜು.26: ಪಾಕ್ ಆಕ್ರಮಿತ ಕಾಶ್ಮೀರದ ಶಾಸನಸಭೆಯ ಮತಏಣಿಕೆ ಸೋಮವಾರ ನಡೆದಿದ್ದು, ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೆಕೆ ಇನ್ಸಾಫ್ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಪಿಓಕೆ ಶಾಸನ ಸಭೆಯ 45 ಸ್ಥಾನಗಳಿಗೆ ರವಿವಾರ ಚುನಾವಣೆ ನಡೆದಿತ್ತು.

 ಪಾಕಿಸ್ತಾನ್ ತೆಹ್ರಿಕೆ ಇನ್ಸಾಫ್ ಪಕ್ಷವು 23 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಎಂಟು ಸ್ಥಾನಗಳನ್ನು ಗೆದ್ದು ದ್ವಿತೀಯ ಸ್ಥಾನಿಯಾಗಿದೆ. ಪಿಓಕೆಯ ಆಡಳಿತಾರೂಢ ಮುಸ್ಲಿಂ ಲೀಗ್ ಪಕ್ಷವು ಕೇವಲ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ತೀವ್ರ ಮುಖಭಂಗ ಅನುಭವಿಸಿದೆಯೆಂದು ಸರಕಾರಿ ಸ್ವಾಮ್ಯದ ರೇಡಿಯೋ ಪಾಕಿಸ್ತಾನ್ ವರದಿ ಮಾಡಿದೆ. 

ಮುಸ್ಲಿಂ ಕಾನ್ಫರೆನ್ಸ್ (ಎಂಸಿ) ಹಾಗೂ ಜಮ್ಮುಕಾಶ್ಮೀರ ಪೀಪಲ್ಸ್ ಪಾರ್ಟಿ (ಜೆಕೆಪಿಪಿ) ತಲಾ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
  ತೆಹ್ರಿಕೆ ಇನ್ಸಾಫ್ ಪಕ್ಷಕ್ಕೆ ಸರಳ ಬಹುಮತ ದೊರೆತಿರುವುದರಿಂದ ಅದು ಇತರ ಯಾವುದೇ ಪಕ್ಷದ ಬೆಂಬಲವಿಲ್ಲದೆ ಸರಕಾರ ರಚಿಸಲು ಸಾಧ್ಯವಾಗಲಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತೆಹ್ರಿಕೆ ಇನ್ಸಾಫ್ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಇದೇ ಮೊದಲ ಸಲವಾಗಿದೆ.

 53 ಸದಸ್ಯರ ಪಾಕ್ ವಿಧಾನಸಭೆಯಲ್ಲಿ ಕೇವಲ 45 ಮಂದಿ ಚುನಾವಣೆಯ ಮೂಲಕ ನೇರವಾಗಿ ಆಯ್ಕೆಯಾಗುತ್ತಾರೆ. ಇಳಿದ ಐದು ಕ್ಷೇತ್ರಗಳು ಮಹಿಳೆಯರಿಗೆ ಹಾಗೂ ಇತರ ಮೂರು ಸ್ಥಾನಳು ತಂತ್ರಜ್ಞರಿಗೆ ಮೀಸಲಾಗಿದ್ದು, ಅವರು ಸರಕಾರದಿಂದ ನಾಮಕರಣಗೊಳ್ಳುತ್ತಾರೆ.

    ಚುನಾವಣೆಯ ಮೂಲಕ ಆಯ್ಕೆಯಾಗುವ 45 ಸದಸ್ಯರ ಪೈಕಿ 33 ಮಂದಿಯನ್ನು ಪಿಓಕೆ ನಿವಾಸಿಗಳು ಹಾಗೂ ಉಳಿದ 12 ಮಂದಿಯನ್ನು ಹಲವು ವರ್ಷಗಳ ಹಿಂದೆ ಕಾಶ್ಮೀರದಿಂದ ಬಂದು, ಪಾಕಿಸ್ತಾನದ ವಿವಿಧ ನಗರಗಳಲ್ಲಿ ನಿರಾಶ್ರಿತರಾಗಿ ನೆಲೆಸಿರುವವರು ಆಯ್ಕೆ ಮಾಡುತ್ತಾರೆ.

  ವಿವಾದಿತ ಗಿಲ್ಗಿಟ್-ಬಾಲ್ಟಿಸ್ತಾನ್ ನಲ್ಲಿ ಚುನಾವಣೆಗಳನ್ನು ನಡೆಸುವ ಪಾಕಿಸ್ತಾನದ ನಿರ್ಧಾರವನ್ನು ಭಾರತ ಖಂಡಿಸಿತ್ತು. ಮಿಲಿಟರಿ ಕ್ರಮಗಳ ಮೂಲಕ ಅತಿಕ್ರಮಿಸಲಾದ ಪ್ರಾಂತದಲ್ಲಿ ಚುನಾವಣೆ ನಡೆಸುವುದು ಕಾನೂನುಪ್ರಕಾರ ಅಸಿಂಧುವಾಗುತ್ತದೆ ಎಂದವರು ಹೇಳುತ್ತಾರೆ.
   
 ಅವರು ಪಿಓಕೆಯ ಪ್ರಧಾನಿ ಸ್ಥಾನದ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿರುವ ತೆಹ್ರಿಕೆ ಇನ್ಸಾಫ್ ಪಕ್ಷದ ಅಭ್ಯರ್ಥಿ ಸುಲ್ತಾನ್ ಮುಹಮ್ಮದ್ ಚೌಧುರಿ ಸ್ವಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ನಿರ್ಗಮನ ಪ್ರಧಾನಿ ಹಾಗೂ ಪಿಎಂಎಲ್-ಎನ್ ನಾಯಕ ರಾಝಾ ಫಾರೂಕ್ ಹೈದರ್ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಪಿಓಕೆಯ ಇನ್ನೋರ್ವ ಮಾಜಿ ಪ್ರಧಾನಿ ಮತ್ತು ಮುಸ್ಲಿಂ ಕಾನ್ಫರೆನ್ಸ್ ಪಕ್ಷದ ವರಿಷ್ಠ ಸರ್ದಾರ್ ಅತೀಕ್ ಅಹ್ಮದ್ ಅವರೂ ವಿಜಯಗಳಿಸಿದ್ದಾರೆ. ರವಿವಾರ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಕ್ಷವು ವ್ಯಾಪಕ ಅಕ್ರಮಗಳನ್ನು ನಡೆಸಿದೆಯೆಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಹಾಗೂ ಪಿಎಂಎಲ್-ಎನ್ ಪಕ್ಷಗಳು ಆಪಾದಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News