ಟ್ಯುನೀಶಿಯಾ ಅಧ್ಯಕ್ಷರಿಂದ ಪ್ರಧಾನಿ ವಜಾ, ಸಂಸತ್ ಅಮಾನತು

Update: 2021-07-26 17:47 GMT
photo: twitter/@CRTV_web

ಟ್ಯುನಿಸ್,ಜು.26: ದೇಶಾದ್ಯಂತ ವಿವಿಧ ನಗರಗಳಲ್ಲಿ ಆಡಳಿತ ವಿರೋಧಿ ಪ್ರತಿಭಟನೆ ಭುಗಿಲೆದ್ದ ಬೆನ್ನಲ್ಲೇ ಟ್ಯುನಿಶಿಯಾ ಅಧ್ಯಕ್ಷ ಖಾಯಿಸ್ ಸಯೀದ್ ಅವರು ಪ್ರಧಾನಿ ಹಿಚೆಮ್ ಮೆಚಿಚಿ ಅವರನ್ನು ವಜಾಗೊಳಿಸಿದ್ದಾರೆ ಹಾಗೂ ಸಂಸತ್ತನ್ನು ಅಮಾನತಿನಲ್ಲಿರಿಸಿದ್ದಾರೆ.

 ಈ ಬಗ್ಗೆ ಅಧ್ಯಕ್ಷ ಖಾಯಿಸ್ ಸಯೀದ್ ಅವರು ಹೇಳಿಕೆಯೊಂದನ್ನು ನೀಡಿ, ನೂತನ ಪ್ರಧಾನಿಯ ನೆರವಿನೊಂದಿಗೆ ತಾನು ವಿಶೇಷ ಅಧಿಕಾರ ಪಡೆದು ಸರಕಾರ ಮುನ್ನಡೆಸುವುದಾಗಿ ತಿಳಿಸಿದ್ದಾರೆ. ನೂತನ ಬೆಳವಣಿಗೆಗಳಿಂದಾಗಿ ಅಧ್ಯಕ್ಷ, ಪ್ರಧಾನಿ ಹಾಗೂ ಸಂಸತ್ತಿನ ನಡುವೆ ಅದಿಕಾರಗಳನ್ನು ವಿಭಜಿಸಿರುವ 2014ರಲ್ಲಿ ಜಾರಿಗೊಂಡ ಸಂವಿಧಾನಕ್ಕೆ ಹೊಸ ಸವಾಲು ಎದುರಾಗಿದೆ.

ನೂತನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯಾರಾದರೂ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿದಲ್ಲಿ ಹಾಗೂ ಗುಂಡೆಸೆತದಂತಹ ಕೃತ್ಯಗಳಿಂದ ತೊಡಗಿದಲ್ಲಿ ಅವರಿಗೆ ಶಸ್ತ್ರಾಸ್ತ್ರ ಪಡೆಗಳು ಬುಲೆಟ್ಗಳಿಂದ ಉತ್ತರಿಸಲಿದ್ದಾರೆ ಎಂದು ಸಯೀದ್ ಹೇಳಿದ್ದಾರೆ.

    ತೀವ್ರವಾದ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಟ್ಯುನಿಶಿಯಾವನ್ನ್ಕು ಕೋವಿಡ್19 ಹಾವಳಿಯು ಇನ್ನಷ್ಟು ಕಂಗೆಡಿಸಿದೆ. ಕಳೆದೊಂದು ವರ್ಷದಿಂದ ಪ್ರಧಾನಿ ಹಿಚೆಮ್ ಹಾಗೂ ಸಯೀದ್ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳು ಹೊಗೆಯಾಡುತ್ತಿದ್ದುದಾಗಿ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

 ಈ ಮಧ್ಯೆ ಟ್ಯುನಿಶಿಯದ ಪಾರ್ಲಿಮೆಂಟ್ ಸ್ಪೀಕರ್ ರ್ಯಾಚೆಡ್ ಘನೌಚಿ ಅವರು ಸಂಸತ್ ಅಮಾನತು ಹಾಗೂ ಪ್ರಧಾನಿಯವರ ವಜಾವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಧ್ಯಕ್ಷ ಖಾಯಿಸ್ ಸಯೀದ್ ಅವರು ಸಂವಿಧಾನದ ವಿರುದ್ಧ ಬಂಡಾಯವೆದ್ದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News