ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಿಂದ ವ್ಯಾಪಕ ಯುದ್ಧಾಪರಾಧ : ಮಾನವಹಕ್ಕು ಸಮಿತಿ ವರದಿ

Update: 2021-07-27 17:48 GMT

ನ್ಯೂಯಾರ್ಕ್, ಜು.27: ಗಾಝಾ ಪಟ್ಟಿಯಲ್ಲಿ ಮೇ 10ರಿಂದ ಆರಂಭವಾಗಿ ನಿರಂತರ 11 ದಿನ ಇಸ್ರೇಲ್‌ನ ಸೇನೆ ನಡೆಸಿದ ದಾಳಿಯು ಯುದ್ಧಾಪರಾದ ಕೃತ್ಯವನ್ನು ಹೋಲುತ್ತದೆ ಎಂದು ಹ್ಯೂಮನ್ ರೈಟ್ಸ್ ವಾಚ್ (ಎಚ್ಆರ್ಡಬ್ಲ್ಯೂ) ಸಂಘಟನೆ ಹೇಳಿದೆ.

ಈ ಆಕ್ರಮಣವನ್ನು ಯಾವುದೇ ಸ್ಪಷ್ಟ ಮಿಲಿಟರಿ ಗುರಿಯನ್ನು ಉದ್ದೇಶಿಸಿ ನಡೆಸಲಾಗಿಲ್ಲ ಎಂದು, 62 ಪೆಲೆಸ್ತೀನ್ ನಾಗರಿಕರ ಸಾವಿಗೆ ಕಾರಣವಾದ ಇಸ್ರೇಲ್ನ 3 ವೈಮಾನಿಕ ದಾಳಿಯ ಬಗ್ಗೆ ಪರಿಶೀಲನೆ ನಡೆಸಿ ತಯಾರಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯುದ್ಧಾಪರಾಧ ಆರೋಪದ ಬಗ್ಗೆ ಗಂಭೀರ ತನಿಖೆ ನಡೆಸುವ ಪ್ರಸ್ತಾವನೆಗೆ ಇಸ್ರೇಲ್ನ ನಿರಂತರ ನಿರಾಕರಣೆ ಹಾಗೂ ಇಸ್ರೇಲ್‌ನ ಜನವಸತಿ ಮೇಲೆ ಪೆಲೆಸ್ತೀನ್ ರಾಕೆಟ್ ದಾಳಿ ಪ್ರಕರಣವು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನಲ್ಲಿ ನಡೆಯುತ್ತಿರುವ ತನಿಖೆಗೆ ಮಹತ್ವ ತಂದಿದೆ ಎಂದು ಎಚ್ ಆರ್ ಡಬ್ಲ್ಯೂ ನ ನಿರ್ದೇಶಕ ಗೆರೀ ಸಿಂಪ್ಸನ್ ಹೇಳಿದ್ದಾರೆ.

ಇದೇ ವೇಳೆ, ಇಸ್ರೇಲ್‌ನ ಜನಸಮೂಹದ ಮೇಲೆ 4000ಕ್ಕೂ ಅಧಿಕ ಅನಿರ್ದೇಶಿತ ರಾಕೆಟ್ ಹಾಗೂ ಮೋರ್ಟರ್ ದಾಳಿ ನಡೆಸಿದ ಪೆಲೆಸ್ತೀನ್ ನ ಸಶಸ್ತ್ರ ಪಡೆಯ ಕೃತ್ಯವೂ ಯುದ್ಧಾಪರಾಧ ಕೃತ್ಯಕ್ಕೆ ಸಮವಾಗಿದೆ. ಇಂತಹ ಆಕ್ರಮಣವು ನಾಗರಿಕರ ವಿರುದ್ಧದ ಉದ್ದೇಶಪೂರ್ವಕ ಮತ್ತು ಗೊತ್ತುಗುರಿಯಿಲ್ಲದ ದಾಳಿಯ ನಿಷೇಧವನ್ನು ಉಲ್ಲಂಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಹಮಾಸ್ ಮತ್ತಿತರ ಪೆಲೆಸ್ತೀನ್ ಗುಂಪುಗಳ ಕ್ರಿಯೆಯ ಬಗ್ಗೆ ಆಗಸ್ಟ್ ನಲ್ಲಿ ಪ್ರತ್ಯೇಕ ವರದಿ ಪ್ರಕಟಿಸುವುದಾಗಿ ಸಂಸ್ಥೆ ಹೇಳಿದೆ.

ಈ ವರದಿಯ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗಾಝಾದಲ್ಲಿರುವ ಸೇನಾ ನೆಲೆಯನ್ನು ಗುರಿಯಾಗಿಸಿ ದಾಳಿ ಮಾಡಿರುವುದಾಗಿ ಇಸ್ರೇಲ್ ಹೇಳುತ್ತಿದೆ. ಗಾಝಾ ಪಟ್ಟಿಯಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್, ಆಕ್ರಮಿತ ಪೂರ್ವ ಜೆರುಸಲೇಂನ ಅಲ್ಅಖ್ಸಾ ಮಸೀದಿಯ ಆವರಣದಿಂದ ಸೇನೆಯನ್ನು ಹಿಂಪಡೆಯಲು ಇಸ್ರೇಲ್ ನಿರಾಕರಿಸಿದ ಬಳಿಕ ಇಸ್ರೇಲ್ ಅನ್ನು ಗುರಿಯಾಗಿಸಿ 4 ಸಾವಿರಕ್ಕೂ ಅಧಿಕ ರಾಕೆಟ್ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಗಾಝಾ ಪಟ್ಟಿಯನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಟ 67 ಮಕ್ಕಳು, 39 ಮಹಿಳೆಯರ ಸಹಿತ ಸುಮಾರು 260 ಮಂದಿ ಬಲಿಯಾಗಿದ್ದರೆ, ಇಸ್ರೇಲ್ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮಕ್ಕಳ ಸಹಿತ 12 ಮಂದಿ ಬಲಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News