ಅಫ್ಘಾನಿಸ್ತಾನದಲ್ಲಿ ಪ್ರತ್ಯೇಕತಾವಾದಿಗಳಿಗೆ ನೆಲೆಯಿಲ್ಲ: ಚೀನಾಕ್ಕೆ ಭರವಸೆ ನೀಡಿದ ತಾಲಿಬಾನ್

Update: 2021-07-28 16:48 GMT

ಕಾಬೂಲ್, ಜು.28: ತಾಲಿಬಾನ್ ನಲ್ಲಿ ನೆಲೆಹೊಂದಿ ಇತರ ದೇಶಗಳ ವಿರುದ್ಧ ಪಿತೂರಿ ನಡೆಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಚೀನಾಕ್ಕೆ ಭೇಟಿ ನೀಡಿರುವ ತಾಲಿಬಾನ್ ನ ನಿಯೋಗ ಭರವಸೆ ನೀಡಿರುವುದಾಗಿ ತಾಲಿಬಾನ್ ನ ವಕ್ತಾರ ಮುಹಮ್ಮದ್ ನಯೀಮ್ ಹೇಳಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ಕ್ರಮೇಣ ಮೇಲುಗೈ ಸಾಧಿಸುತ್ತಿರುವ ತಾಲಿಬಾನ್, ಗಡಿಭಾಗದ ಬಹುತೇಕ ಪ್ರದೇಶಗಳನ್ನು ತನ್ನ ನಿಯಂತ್ರಣಕ್ಕೆ ಪಡೆದಿದೆ. ಈ ಮಧ್ಯೆ, ತಾಲಿಬಾನ್ ನ ನಿಯೋಗವೊಂದು ಅಧಿಕಾರಿಗಳೊಂದಿಗೆ ಮಾತುಕತೆಗಾಗಿ ಚೀನಾಕ್ಕೆ ಭೇಟಿ ನೀಡಿದೆ. ಅಪಘಾನಿಸ್ತಾನದೊಂದಿಗೆ ಚೀನಾ ಕೇವಲ 76 ಕಿ.ಮೀ ಉದ್ದದ ಗಡಿಯನ್ನು ಹೊಂದಿದ್ದರೂ, ಉಯಿಗರ್ ಪ್ರತ್ಯೇಕತಾವಾದಿಗಳು ಚೀನಾ ವಿರುದ್ಧದ ಪ್ರತಿರೋಧಕ್ಕೆ ಅಫ್ಘಾನಿಸ್ತಾನವನ್ನು ನೆಲೆಯಾಗಿ ಬಳಸಬಹುದು ಎಂಬ ಆತಂಕ ಚೀನಾದಲ್ಲಿದೆ.
 
ಯಾವುದೇ ದೇಶದ ಭದ್ರತೆಗೆ ವಿರುದ್ಧವಾದ ಕೃತ್ಯಕ್ಕೆ ಅಫ್ಘಾನಿಸ್ತಾನದ ಭೂಮಿಯನ್ನು ಬಳಸಲು ಅವಕಾಶವಿಲ್ಲ ಎಂದು ಇಸ್ಲಾಮಿಕ್ ಎಮಿರೇಟ್ಸ್ ಚೀನಾಕ್ಕೆ ಭರವಸೆ ನೀಡಿದೆ. ಅಫ್ಘಾನಿಸ್ತಾನದ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡದೆ, ಸಮಸ್ಯೆ ಪರಿಹರಿಸಲು ಮತ್ತು ಶಾಂತಿ ಸ್ಥಾಪಿಸಲು ನೆರವಾಗುವುದಾಗಿ ಚೀನಾ ಭರವಸೆ ನೀಡಿದೆ ಎಂದು ನಯೀಮ್ ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮೇಲುಗೈ ಪಡೆಯುವ ವಿಶ್ವಾಸದಲ್ಲಿರುವ ತಾಲಿಬಾನ್, ಅಧಿಕಾರಕ್ಕೆ ಬಂದ ಮೇಲೆ ಜಾಗತಿಕ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಪ್ರಕ್ರಿಯೆಗೆ ವೇಗ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News