ಚೀನಾ: ಕೋಟ್ಯಧಿಪತಿ ಕೃಷಿ ಉದ್ಯಮಿ ಸುನ್ ಗೆ 18 ವರ್ಷ ಜೈಲು ಶಿಕ್ಷೆ

Update: 2021-07-28 17:04 GMT

ಬೀಜಿಂಗ್, ಜು.28: ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಚೀನಾದ ಕೋಟ್ಯಧಿಪತಿ ಕೃಷಿ ಉದ್ಯಮಿ ಸುನ್ ದಾವುಗೆ ಅಲ್ಲಿನ ನ್ಯಾಯಾಲಯವೊಂದು 18 ವರ್ಷದ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿರುವುದಾಗಿ ವರದಿಯಾಗಿದೆ.

  
ಸರಕಾರದ ಕಾರ್ಯನಿರ್ವಹಣೆಗೆ ಅಡ್ಡಿ ಉಂಟು ಮಾಡಿರುವುದು, ಸರಕಾರಿ ಸಂಸ್ಥೆಗಳ ಮೇಲೆ ದಾಳಿ ನಡೆಸಲು ಗುಂಪು ಸೇರಿಸಿರುವುದು, ಜಗಳ ಆರಂಭಿಸಿ ಗಲಭೆಗೆ ಪ್ರಚೋದನೆ ನೀಡಿರುವುದು ಸೇರಿದಂತೆ ಸುನ್ ವಿರುದ್ಧ ದಾಖಲಿಸಿದ್ದ ಹಲವು ಆರೋಪಗಳು ಸಾಬೀತಾಗಿದೆ ಎಂದು ಬೀಜಿಂಗ್ ಬಳಿಯ ಗೊಬೆಡಿಯನ್ ನಗರದ ನ್ಯಾಯಾಲಯ ತೀರ್ಪು ನೀಡಿದೆ. ಸರಕಾರದ ಹಲವು ಉಪಕ್ರಮಗಳನ್ನು ಟೀಕಿಸಿರುವ ಸುನ್, ಗ್ರಾಸ್ರೂಟ್ಸ್ ರೈಟ್ಸ್ ಸಂಘಟನೆಯ ಬೆಂಬಲಿಗರೂ ಆಗಿದ್ದಾರೆ. ‌

2019ರಲ್ಲಿ ಚೀನಾದಲ್ಲಿ ಹಂದಿಜ್ವರ ವ್ಯಾಪಕವಾಗಿ ಹರಡಿದ್ದ ಸಂದರ್ಭ ಅಧಿಕಾರಿಗಳ ನಿರ್ಲಕ್ಷ್ಯವನ್ನು ವಿರೋಧಿಸಿದ್ದ ಸುನ್, ಸತ್ತುಬಿದ್ದಿದ್ದ ಹಂದಿಗಳ ರಾಶಿಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. 

1980ರಲ್ಲಿ ಕೆಲವು ಕೋಳಿ ಹಾಗೂ ಹಂದಿಗಳೊಂದಿಗೆ ಕೃಷಿ ಉದ್ಯಮ ಆರಂಭಿಸಿದ ಸುನ್ ಅವರ ಸಂಸ್ಥೆ ಕ್ರಮೇಣ ಚೀನಾದ ಖಾಸಗಿ ವಲಯದ ಬೃಹತ್ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ಅವರ ಮಾಲಕತ್ವದ ಸಂಸ್ಥೆ ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರ ಮಧ್ಯೆ ಜಮೀನಿಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಕಳೆದ ನವೆಂಬರ್ನಲ್ಲಿ ಸುನ್ ರನ್ನು ಬಂಧಿಸಿ ರಹಸ್ಯವಾಗಿ ವಿಚಾರಣೆ ನಡೆಸಲಾಗಿದೆ. ಸುನ್ ಸುಮಾರು 4,75,000 ಡಾಲರ್ ದಂಡವನ್ನೂ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News