ಅಪಘಾನಿಸ್ತಾನದಲ್ಲಿ ಗೊಂದಲ ಸೃಷ್ಟಿಸಿದ ಅಮೆರಿಕ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಭಿಮತ

Update: 2021-07-28 17:06 GMT
photo: twitter/@ImranKhanPTI

ಇಸ್ಲಾಮಾಬಾದ್, ಜು.28: ಅಪಘಾನಿಸ್ತಾನದಲ್ಲಿನ ಪರಿಸ್ಥಿತಿ ಬಿಗಡಾಯಿಸಿ ಗೊಂದಲ ಸೃಷ್ಟಿಯಾಗಲು ಅಮೆರಿಕ ಕಾರಣವಾಗಿದೆ. ತಾಲಿಬಾನ್ ಸಹಿತ ಎಲ್ಲಾ ದಳಗಳು ಸೇರಿದ ರಾಜಕೀಯ ಪ್ರಕ್ರಿಯೆಯು ಅಲ್ಲಿನ ಪರಿಸ್ಥಿತಿಗೆ ಉತ್ತಮ ಪರಿಹಾರವಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿರುವುದಾಗಿ ವರದಿಯಾಗಿದೆ. 

ಅಮೆರಿಕದ ‘ಪಿಬಿಎಸ್ ನ್ಯೂಸ್ಅವರ್’ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, 2001ರಲ್ಲಿ ಪ್ರಥಮ ಬಾರಿಗೆ ಅಪಘಾನಿಸ್ತಾನದಲ್ಲಿ ಸೈನಿಕ ಕಾರ್ಯಾಚರಣೆ ನಡೆಸಲು ಅಮೆರಿಕಕ್ಕೆ ದೊರೆತ ಪ್ರಚೋದನೆ ಹಾಗೂ ನಂತರ ರಾಜಕೀಯ ಪರಿಹಾರದ ಉದ್ದೇಶದಿಂದ ತಾಲಿಬಾನ್ನೊಂದಿಗಿನ ಮಾತುಕತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಇಮ್ರಾನ್ ಉತ್ತರಿಸುತ್ತಿದ್ದರು. 

ಅಪಘಾನಿಸ್ತಾನದಲ್ಲಿ ಸೇನಾ ಕಾರ್ಯಾಚರಣೆಯ ಮೂಲಕ ಪರಿಹಾರ ಕಂಡುಕೊಳ್ಳಲು ಅವಕಾಶವೇ ಇಲ್ಲದಿದ್ದರೂ ಈ ಆಯ್ಕೆಯ ಬಗ್ಗೆ ಒಲವು ತೋರಿದ ಅಮೆರಿಕ ಅಲ್ಲಿನ ಪರಿಸ್ಥಿತಿಯನ್ನು ನಿಜಕ್ಕೂ ಗೊಂದಲಮಯಗೊಳಿಸಿದೆ. ಅಪಘಾನಿಸ್ತಾನದ ಇತಿಹಾಸ ಬಲ್ಲ ನನ್ನಂತೆ ಹಲವರು ಸೈನಿಕ ಕಾರ್ಯಾಚರಣೆ ಪರಿಹಾರವಲ್ಲ ಎಂದು ಸಲಹೆ ನೀಡಿದಾಗ ನಮ್ಮನ್ನು ಅಮೆರಿಕ ವಿರೋಧಿಗಳು ಎಂದು ಟೀಕಿಸಲಾಯಿತು. ನನ್ನನ್ನು ತಾಲಿಬಾನ್ ಖಾನ್ ಎಂದು ಕರೆದರು. ಅಪಘಾನಿಸ್ತಾನದ ಸಮಸ್ಯೆಗೆ ಸೈನಿಕ ಕಾರ್ಯಾಚರಣೆ ಪರಿಹಾರವಲ್ಲ ಎಂದು ಅಮೆರಿಕಕ್ಕೆ ಮನದಟ್ಟು ಆಗುವಷ್ಟರಲ್ಲಿ , ದುರದೃಷ್ಟವಶಾತ್ ಅಮೆರಿಕ ಅಥವಾ ನೇಟೋ ದೇಶಗಳು ಚೌಕಾಶಿ ಮಾಡುವ ಅಧಿಕಾರ ಕಳೆದುಕೊಂಡಿದ್ದವು.
 
ಅಪಘಾನಿಸ್ತಾನದಲ್ಲಿ ಸುಮಾರು 1,50,000 ನೇಟೋ ಪಡೆಗಳಿದ್ದಾಗಲೇ ಅಮೆರಿಕ ರಾಜಕೀಯ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಿತ್ತು . ಆದರೆ ಹಾಗಾಗಲಿಲ್ಲ. ಬಳಿಕ ವಿದೇಶಿ ಪಡೆಗಳ ಸಂಖ್ಯೆಯನ್ನು ಸುಮಾರು 10,000ಕ್ಕೆ ಇಳಿಸಲಾಯಿತು ಹಾಗೂ ಅಪಘಾನಿಸ್ತಾನದಿಂದ ಸೇನೆ ವಾಪಸಾತಿಯ ಘೋಷಣೆ ಹೊರಬಿತ್ತು. ಆಗ ತಾವೇ ಗೆದ್ದೆವು ಎಂದು ತಾಲಿಬಾನ್ ಭಾವಿಸಿದ್ದರಿಂದ ಈಗ ಅವರನ್ನು ಸಂಧಾನಕ್ಕೆ ಒಪ್ಪಿಸುವುದು ಸುಲಭವಲ್ಲ ಎಂದು ಇಮ್ರಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News