ವಿಶ್ವಸಂಸ್ಥೆ ಭದ್ರತಾ ಸಮಿತಿ ಕಾರ್ಯನಿರ್ವಹಣೆ : ಇಸ್ರೇಲ್, ಫೆಲೆಸ್ತೀನ್ ರಾಯಭಾರಿಗಳ ಟೀಕೆ

Update: 2021-07-29 17:08 GMT

ನ್ಯೂಯಾರ್ಕ್, ಜು.29: ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾರ್ಯನಿರ್ವಹಣೆ ಬಗ್ಗೆ ಬುಧವಾರ ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಮತ್ತು ಫೆಲೆಸ್ತೀನ್ ರಾಯಭಾರಿಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ. ‘ಭದ್ರತಾ ಸಮಿತಿ ಸದಸ್ಯರು ಪೂರ್ವ ಜೆರುಸಲೇಂ ನಲ್ಲಿರುವ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸುತ್ತಾ ಸಮಯ ಕಳೆಯುವ ಬದಲು, ಇರಾನ್ ಬಗ್ಗೆ ಹಾಗೂ ಆ ದೇಶವು ಲೆಬನಾನ್, ಸಿರಿಯಾ, ಯೆಮನ್ ಮತ್ತು ಇರಾಕ್ನಲ್ಲಿ ನಡೆಸುತ್ತಿರುವ ಪ್ರಚೋದನಾ ಕ್ರಮಗಳ ಬಗ್ಗೆ, ಹಮಾಸ್ಗಳ ಚಟುವಟಿಕೆ ಬಗ್ಗೆ ಚರ್ಚೆ ಕೇಂದ್ರೀಕೃತವಾಗಬೇಕು. ಮಧ್ಯಪ್ರಾಚ್ಯ ಪ್ರದೇಶ ಮಧ್ಯಯುಗದ ಕತ್ತಲಿನಲ್ಲಿಯೇ ಇರಬೇಕು ಎಂದು ಹಮಾಸ್ ಹಾಗೂ ಇರಾನ್ ಶಪ್ರಯತ್ನ ನಡೆಸುತ್ತಿವೆ ’ ಎಂದು ಅಮೆರಿಕ ಮತ್ತು ವಿಶ್ವಸಂಸ್ಥೆಗೆ ಇಸ್ರೇಲ್ನ ರಾಯಭಾರಿಯಾಗಿರುವ ಗಿಲಾದ್ ಎರ್ಡನ್ ಆಗ್ರಹಿಸಿದ್ದಾರೆ.

ಮೇ ತಿಂಗಳಿನಲ್ಲಿ ಗಾಝಾ ಪಟ್ಟಿಯಲ್ಲಿ ನಡೆದ ಯುದ್ಧದ ಬಳಿಕ ಅಲ್ಲಿ ನಡೆಯುತ್ತಿರುವ ಮಾನವೀಯ ಉಪಕ್ರಮಗಳು, ಪುನರ್ನಿರ್ಮಾಣ ಕಾರ್ಯಗಳು, ಪೂರ್ವ ಜೆರುಸಲೇಂನಲ್ಲಿ ಫೆಲೆಸ್ತೀನ್ ಕುಟುಂಬಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಮುಂದುವರಿದಿರುವುದು, ಅವರ ಮನೆಯನ್ನು ಧ್ವಂಸಗೊಳಿಸಿರುವುದು, ಭ್ರಷ್ಟಾಚಾರ ವಿರೋಧಿಸಿ ಫೆಲೆಸ್ತೀನ್ನಲ್ಲಿ ಕಳೆದ ತಿಂಗಳು ನಡೆದ ಪ್ರತಿಭಟನೆ, ರಾಜಕೀಯ ಕಾರ್ಯಕರ್ತ ನಿಝಾರ್ ಬನತ್ರನ್ನು ಬಂಧಿಸಿದ ಬಳಿಕ ಕಸ್ಟಡಿಯಲ್ಲಿ ಅವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಭಟನೆಯನ್ನು ಅಲ್ಲಿನ ಆಡಳಿತ ಹಿಂಸಾತ್ಮಕ ರೀತಿಯಲ್ಲಿ ಪ್ರತಿಬಂಧಿಸಿರುವುದನ್ನು ಚರ್ಚಿಸಲು ನಡೆದ ಭದ್ರತಾ ಸಮಿತಿ ಸಭೆುಲ್ಲಿ ಗಿಲಾದ್ ಎರ್ಡನ್ ಮಾತನಾಡಿದರು.

 ಲೆಬನಾನ್ನಲ್ಲಿರುವ ಬಿಕ್ಕಟ್ಟಿನ ಬಗ್ಗೆ ಈಗ ಚರ್ಚೆ ನಡೆಯುವುದಿಲ್ಲವೇ ಎಂದು 15 ಸದಸ್ಯರ ಸಮಿತಿಯನ್ನು ಪ್ರಶ್ನಿಸಿದ ಅವರು, ವಿಶ್ವಸಂಸ್ಥೆ ಇಸ್ರೇಲ್ ಕುರಿತು ತಾರತಮ್ಯದ ಧೋರಣೆ ಹೊಂದಿದೆ ಎಂದು ಟೀಕಿಸಿದರು. ಜೊತೆಗೆ, ಯುದಿತ್ ಒಪೆನ್ಹೆಮರ್ರನ್ನು ಸಭೆಗೆ ಆಹ್ವಾನಿಸಿರುವುದನ್ನು ಆಕ್ಷೇಪಿಸಿದರು. ಜೆರುಸಲೇಂ ಅನ್ನು ಎಲ್ಲಾ ನಿವಾಸಿಗಳು ಒಳಗೊಂಡಿರುವ ಸುರಕ್ಷಿತ ನಗರವನ್ನಾಗಿಸಿ ರೂಪಿಸಬೇಕು ಎಂದು ಆಗ್ರಹಿಸುವ ಇಸ್ರೇಲ್ನ ಎನ್ಜಿಒ ಸಂಸ್ಥೆ ‘ಇರ್ ಅಮೀಮ್’ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ ಯುದಿತ್ . ಫೆಲೆಸ್ತೀನ್ ಅಥಾರಿಟಿಯನ್ನು ಟೀಕಿಸುವ ಯಾವುದೇ ಎನ್ಜಿಒಗೆ ಭದ್ರತಾ ಸಮಿತಿ ಸಭೆಗೆ ಪ್ರವೇಶವಿಲ್ಲ. ಇಸ್ರೇಲ್ ವಿರುದ್ಧದ ಈ ರೀತಿಯ ತಾರತಮ್ಯದ ಧೋರಣೆಯಿಂದ ಬೆನ್ ಆ್ಯಂಡ್ ಜೆರೀಸ್, ಯುನಿಲಿವರ್ನಂತಹ ಸಂಸ್ಥೆಗಳೂ ವಿಶ್ವದ ಏಕೈಕ ಯೆಹೂದಿ ದೇಶದ ವಿರುದ್ಧ ಬಹಿಷ್ಕಾರ ವಿಧಿಸಲು ಪ್ರೇರಣೆ ನೀಡಿದೆ ಎಂದರು. ಬಹಿಷ್ಕಾರ ಅಥವಾ ಭದ್ರತಾ ಸಮಿತಿಯ ಮಧ್ಯಸ್ಥಿಕೆಯಿಂದ ಅಲ್ಲ, ಮಾತುಕತೆಯಿಂದ ಶಾಂತಿ ನೆಲೆಸಲು ಸಾಧ್ಯ ಎಂಬುದು ಇಸ್ರೇಲ್ ಜತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಯುಎಇ ಮತ್ತು ಬಹರೈನ್ ದೇಶಗಳೊಂದಿಗೆ ಏರ್ಪಟ್ಟ ಅಬ್ರಹಾಂ ಒಪ್ಪಂದ ಉದಾಹರಣೆಯಾಗಿದೆ ಎಂದರು.

  ವಿಶ್ವಸಂಸ್ಥೆಗೆ ಫೆೆಲೆಸ್ತೀನ್ನ ಖಾಯಂ ವೀಕ್ಷಕರಾಗಿರುವ ರಿಯಾದ್ ಮನ್ಸೂರ್ ಅವರೂ ಭದ್ರತಾ ಸಮಿತಿಯ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ. ಸಂಘರ್ಷ, ಯುದ್ಧದ ಸಮಯದಲ್ಲಿ ಸಮಿತಿಯ ಇತಿಮಿತಿ ಒಂದು ವೈಫಲ್ಯವಾಗಿದ್ದು ಶಾಂತಿ ಸ್ಥಾಪನೆಯಾಗಬೇಕಾದರೆ ಸಮಿತಿ ಇನ್ನೂ ಹೆಚ್ಚಿನ ಪಾತ್ರ ವಹಿಸಬೇಕು ಎಂಬುದನ್ನು ಸೂಚಿಸುತ್ತದೆ. ನಿರ್ಣಯ ಸಂಖ್ಯೆ 2,334 ಸೇರಿದಂತೆ ಸಮಿತಿಯೇ ದಾಖಲಿಸಿರುವ ನಿರ್ಣಯಗಳಿವೆ. ಆಕ್ರಮಿತ ಪ್ರದೇಶದಲ್ಲಿ ಇಸ್ರೇಲ್ ನಡೆಸುತ್ತಿರುವ ವಸಾಹತು ಚಟುವಟಿಕೆ ಅಂತರ್ರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಈ ನಿರ್ಣಯಗಳನ್ನು ಜಾರಿಗೊಳಿಸುವ ಸಾಧನ, ವ್ಯವಸ್ಥೆ ಸಮಿತಿಯ ಬಳಿಯಿದೆ. ಅಂತರ್ರಾಷ್ಟ್ರೀಯ ಕಾನೂನಿನ ಪಾಲನೆಗೆ ಅಂತರ್ರಾಷ್ಟ್ರೀಯ ಕ್ರಮದ ಅಗತ್ಯವಿದೆ ಎಂದು ಬುಧವಾರದ ಸಭೆಯಲ್ಲಿ ಉದಿತ್ ಒಪೆನ್ಹೇಮರ್, ಆಕ್ರಮಿತ ಫೆಲೆಸ್ತೀನ್ ಪ್ರದೇಶಕ್ಕೆ ವಿಶ್ವಸಂಸ್ಥೆಯ ಸಂಯೋಜಕರು, ಮಧ್ಯಪ್ರಾಚ್ಯ ಪ್ರಕ್ರಿಯೆಗೆ ವಿಶ್ವಸಂಸ್ಥೆಯ ವಿಶೇಷ ಉಪ ಸಂಯೋಜಕರು ಸ್ಪಷ್ಟ ಸಂಕೇತ ನೀಡಿದ್ದಾರೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News