ಹೈಟಿ ಅಧ್ಯಕ್ಷರ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಮಾಜಿ ನ್ಯಾಯಾಧೀಶೆ ಕೈವಾಡದ ಶಂಕೆ: ಪೊಲೀಸರ ಹೇಳಿಕೆ

Update: 2021-07-31 18:03 GMT

ಪೋರ್ಟ್-ಒ-ಪ್ರಿನ್ಸ್, ಜು.31: ಈ ತಿಂಗಳ ಆರಂಭದಲ್ಲಿ ನಡೆದ ಹೈಟಿ ಅಧ್ಯಕ್ಷರ ಹತ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನ ಮಾಜಿ ನ್ಯಾಯಾಧೀಶೆ ವೆಂಡೆಲೆ ಕಾಖ್ಥೆಲಟ್ ಕೈವಾಡವಿರುವ ಶಂಕೆಯಿದ್ದು ತಲೆಮರೆಸಿಕೊಂಡಿರುವ ಅವರ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಲಾಗಿದೆ ಎಂದು ಹೈಟಿ ಪೊಲೀಸರು ಹೇಳಿದ್ದಾರೆ.

ಹೈಟಿ ಅಧ್ಯಕ್ಷ ಜೊವೆನಲ್ ಮೋಯಿಸ್ರನ್ನು ಅವರ ನಿವಾಸದಲ್ಲೇ ಹತ್ಯೆ ಮಾಡಲಾಗಿತ್ತು. ಹತ್ಯೆ ನಡೆಸಿದ ಆರೋಪಿಗಳಾದ ಕೊಲಂಬಿಯಾದ ಬಾಡಿಗೆ ಹಂತಕರನ್ನು ಕಾಖ್ಥೆಲಟ್ ಭೇಟಿ ಮಾಡಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ತನ್ನ ವಿರುದ್ಧ ಕ್ಷಿಪ್ರಕ್ರಾಂತಿಗೆ ಸಂಚುರೂಪಿಸಿದ ಆರೋಪದಲ್ಲಿ ಫೆಬ್ರವರಿಯಲ್ಲಿ ಕಾಖ್ಥೆಲಟ್ ಹಾಗೂ ಇತರ ಇಬ್ಬರು ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಅಧ್ಯಕ್ಷ ಮೋಯಿಸ್ ವಜಾಗೊಳಿಸಿದ್ದರು.

ಕೊಲಂಬಿಯಾದ ಬಾಡಿಗೆ ಹಂತಕರು ಹಾಗೂ ಹೈಟಿ ಮೂಲದ ಕೆಲವು ಅಮೆರಿಕನ್ನರನ್ನು ಹತ್ಯೆ ಆರೋಪದಲ್ಲಿ ಬಂಧಿಸಿದ್ದು ತಾವು ಕಾಖ್ಥೆಲಟ್ರನ್ನು ಅವರ ಮನೆಯಲ್ಲೇ 2 ಬಾರಿ ಭೇಟಿಯಾಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಮತ್ತು ಈ ವೇಳೆ ನಡೆದ ಒಪ್ಪಂದದ ದಾಖಲೆ(ಸಹಿ ಇರುವ ದಾಖಲೆ)ಯನ್ನು ವಿಚಾರಣಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಖ್ಥೆಲಟ್ ಅವರ ಹಲವು ನಿವಾಸಗಳ ಮೇಲೆ ದಾಳಿ ನಡೆಸಿದ್ದರೂ ಕಾಖ್ಥೆಲಟ್ ಸುಳಿವು ಪತ್ತೆಯಾಗಿಲ್ಲ. ಅವರ ವಿರುದ್ಧ ವಾಂಟೆಡ್ ಪೋಸ್ಟರ್ಗಳನ್ನು ಹಲವೆಡೆ ಅಂಟಿಸಲಾಗಿದೆ. ಮಂಗಳವಾರ ಮೊಯಿಸ್ ಅವರ ಭದ್ರತಾ ವಿಭಾಗದ ಉನ್ನತ ಅಧಿಕಾರಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News