×
Ad

ಫುಟ್‌ಬಾಲ್ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ ಪ್ರಕರಣ: 11 ಮಂದಿ ಬಂಧನ

Update: 2021-08-05 22:47 IST
photo : twitter

ಲಂಡನ್, ಆ.5: ಇಂಗ್ಲೆಂಡ್ ಫುಟ್‌ಬಾಲ್ ತಂಡದ ಕರಿಯ ಆಟಗಾರರ ವಿರುದ್ಧ ಆನ್‌ಲೈನ್‌ನಲ್ಲಿ ಜನಾಂಗೀಯ ನಿಂದನೆ ನಡೆಸಿದ ಆರೋಪದಲ್ಲಿ ಬ್ರಿಟನ್‌ನ ಪೊಲೀಸರು 11 ಮಂದಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಯುರೊ ಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇಟೆಲಿ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲುಂಡ ಬಳಿಕ, ಇಂಗ್ಲೆಂಡ್ ತಂಡದಲ್ಲಿರುವ ಕರಿಯ ಆಟಗಾರರಾದ ಮಾರ್ಕಸ್ ರಷ್‌ಫೋರ್ಡ್, ಜೇಡನ್ ಸ್ಯಾಂಚೊ ಮತ್ತು ಬುಕಾಯೊ ಸಾಕಾ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಜನಾಂಗೀಯ ನಿಂದನೆಯ ಟೀಕೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಒಬ್ಬನನ್ನು ಹೊರತುಪಡಿಸಿ ಉಳಿದವರು 18ರಿಂದ 63 ವರ್ಷದವರು ಎಂದು ಪೊಲೀಸರು ಹೇಳಿದ್ದಾರೆ.

 ಪಂದ್ಯದ ಬಳಿಕ ಇಂಗ್ಲೆಂಡ್ ತಂಡದ ಕರಿಯ ಆಟಗಾರರನ್ನು ನಿಂದಿಸುವ ಉದ್ದೇಶದ 600ಕ್ಕೂ ಅಧಿಕ ಪೋಸ್ಟ್‌ಗಳ ಬಗ್ಗೆ ತನಗೆ ದೂರು ಬಂದಿರುವುದಾಗಿ ಯುಕೆ ಫುಟ್‌ಬಾಲ್ ಪೊಲೀಸಿಂಗ್ ಯುನಿಟ್ ಹೇಳಿದೆ. ಇದರಲ್ಲಿ 207 ಕ್ರಿಮಿನಲ್ ಸ್ವರೂಪದ ಟ್ವೀಟ್‌ಗಳಾಗಿವೆ . ಇದರಲ್ಲಿ 34 ಖಾತೆಗಳು ಬ್ರಿಟನ್ ಪ್ರಜೆಗಳಿಗೆ ಸೇರಿದ್ದು ಇದರಲ್ಲಿ 11 ಆರೋಪಿಗಳನ್ನು ಬಂಧಿಸಲಾಗಿದೆ. 123 ಖಾತೆಗಳು ಬ್ರಿಟನ್‌ನಿಂದ ಹೊರಗಿನ ಪ್ರದೇಶಕ್ಕೆ ಸಂಬಂಧಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಈ ರೀತಿಯ ಹೇಯ ಪ್ರತಿಕ್ರಿಯೆ ನೀಡಿದ ಬಳಿಕ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ನ ಹಿಂದೆ ಅಡಗಿ ಕೂತು ಪಾರಾಗಬಹುದು ಎಂದು ಕೆಲವರು ಭಾವಿಸಿದ್ದಾರೆ. ಆದರೆ ಇಂತಹ ಕೃತ್ಯ ನಡೆಸುವ ಮೊದಲು 2 ಬಾರಿ ಆಲೋಚಿಸುವುದು ಒಳಿತು. ಸಾಮಾಜಿಕ ಮಾಧ್ಯಮದಲ್ಲಿ ನಿಂದನೆ ಮಾಡುವವರನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸುವ ತನಿಖಾ ವ್ಯವಸ್ಥೆ ನಮ್ಮಲ್ಲಿದೆ ಎಂದು ಪೊಲೀಸ್ ಅಧಿಕಾರಿ ಮಾರ್ಕ್ ರಾಬರ್ಟ್ಸ್ ಹೇಳಿದ್ದಾರೆ.

ಇಂಗ್ಲೆಂಡ್ ಫುಟ್‌ಬಾಲ್ ಅಸೋಸಿಯೇಷನ್, ತಂಡದ ಮ್ಯಾನೇಜರ್ ಹಾಗೂ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಸಹಿತ ಹಲವರು ಈ ಪ್ರಕರಣವನ್ನು ಖಂಡಿಸಿದ್ದರು. ಜೊತೆಗೆ, ಆನ್‌ಲೈನ್ ವೇದಿಕೆಯನ್ನು ದ್ವೇಷ ಪ್ರಸಾರಕ್ಕೆ ಬಳಸುವುದರ ವಿರುದ್ಧ ಆನ್‌ಲೈನ್ ಅಭಿಯಾನವೂ ಆರಂಭವಾಗಿತ್ತು.

ದೇಶದ ಸಾರ್ವಜನಿಕ ಇಲೆಕ್ಟ್ರಾನಿಕ್ ಕಮ್ಯುನಿಕೇಷನ್ ಜಾಲವ್ಯವಸ್ಥೆಯನ್ನು ಅಕ್ರಮ ಚಟುವಟಿಕೆಗೆ ಬಳಸುವುದು ಅಪರಾಧವಾಗಿದೆ ಎಂದು ಬ್ರಿಟನ್‌ನ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದ್ದು, ಇದರಡಿಯ ಅಪರಾಧಕ್ಕೆ ಗರಿಷ್ಟ 2 ವರ್ಷ ಜೈಲುಶಿಕ್ಷೆ ವಿಧಿಸಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News