24 ಗಂಟೆಯಲ್ಲಿ 2 ಪ್ರಾಂತೀಯ ರಾಜಧಾನಿ ತಾಲಿಬಾನ್ ವಶಕ್ಕೆ

Update: 2021-08-08 16:36 GMT

ಕಾಬೂಲ್, ಆ.8: ಅಪಘಾನ್ ನ  ಮತ್ತೆರಡು ಪ್ರಾಂತೀಯ ರಾಜಧಾನಿಗಳನ್ನು ರವಿವಾರ ತಾಲಿಬಾನ್ ಕೈವಶ ಮಾಡಿಕೊಂಡಿದ್ದು, ಇದರೊಂದಿಗೆ ಕಳೆದ 3 ದಿನದಲ್ಲಿ 4 ಪ್ರಾಂತೀಯ ರಾಜಧಾನಿ ತಾಲಿಬಾನ್ ನಿಯಂತ್ರಣಕ್ಕೆ ಬಂದಂತಾಗಿದೆ ಎಂದು ವರದಿಯಾಗಿದೆ. ‌

ಉತ್ತರ ಅಪಘಾನಿಸ್ತಾನದ ಕುಂದುಝ್ ಮತ್ತು ಸರ್-ಎ-ಪುಲ್ ನಗರಗಳನ್ನು ಭಾರೀ ಹೋರಾಟದ ಬಳಿಕ ಕೆಲ ಘಂಟೆಗಳೊಳಗೆ ತಾಲಿಬಾನ್ ಪಡೆ ವಶಕ್ಕೆ ಪಡೆಯಿತು ಎಂದು ಪ್ರಾಂತ್ಯದ ಸಂಸದರು ಹಾಗೂ ಸ್ಥಳೀಯರು ದೃಢಪಡಿಸಿದ್ದು ಕುಂದುಝ್ ನಗರದಲ್ಲೀಗ ಅರಾಜಕ ಪರಿಸ್ಥಿತಿಯಿದೆ ಎಂದಿದ್ದಾರೆ. 

ಅಪಘಾನ್ ಸೇನೆ ಹಾಗೂ ಸರಕಾರಿ ಸಿಬಂದಿಗಳು ಅಲ್ಲಿಂದ 2 ಮೈಲು ದೂರದಲ್ಲಿರುವ ಸೇನಾ ನೆಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಸರ್-ಎ-ಪುಲ್ ನಿಲ್ದಾಣಕ್ಕೆ ಬಂದ ವಿಮಾನವೊಂದು ಕೆಳಗಿಳಿಯದೆ ವಾಪಸಾಗಿದೆ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಪರ್ವೀನಾ ಆಝ್ಮಿ ದೂರವಾಣಿ ಮೂಲಕ ಮಾಹಿತಿ ನೀಡಿರುವುದಾಗಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

"ಭೀಕರ ಹೋರಾಟದ ಬಳಿಕ ದೇವರ ದಯೆಯಿಂದ ಮುಜಾಹಿದೀನ್ ಗಳು ಕುಂದುಝ್ ನಗರವನ್ನು ವಶಪಡಿಸಿಕೊಂಡಿದ್ದಾರೆ. ಕೆಲವೇ ಘಂಟೆಗಳ ಬಳಿಕ ಸರ್-ಎ-ಪುಲ್ ನಗರ, ಸರಕಾರಿ ಕಚೇರಿ ಸಹಿತ ಎಲ್ಲಾ ಸಂಸ್ಥೆಗಳು ಮುಜಾಹಿದೀನ್ಗಳ ನಿಯಂತ್ರಣಕ್ಕೆ ಬಂದಿದೆ" ಎಂದು ತಾಲಿಬಾನ್ ಹೇಳಿಕೆ ನೀಡಿದೆ. ಸರಕಾರಿ ಪಡೆಗಳು ಪ್ರಮುಖ ಸರಕಾರಿ ಸಂಸ್ಥೆಗಳನ್ನು ಮರಳಿ ಕೈವಶ ಮಾಡಿಕೊಳ್ಳಲು ದಾಳಿ ಮುಂದುವರಿಸಿವೆ. ರಾಷ್ಟ್ರೀಯ ರೇಡಿಯೊ, ಟಿವಿ ವಾಹಿನಿಯ ಕಟ್ಟಡ ಸಹಿತ ಕೆಲವು ಕಟ್ಟಡಗಳಿಂದ ತಾಲಿಬಾನ್ ಉಗ್ರರನ್ನು ಹೊರಗಟ್ಟುವ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅಪಘಾನ್ ನ ರಕ್ಷಣಾ ಇಲಾಖೆಯ ವಕ್ತಾರರು ಹೇಳಿದ್ದಾರೆ.

ಉತ್ತರ ಭಾಗದಲ್ಲಿ ತಾಲಿಬಾನ್ ಮೇಲುಗೈ ಸಾಧಿಸಿರುವುದು ಅಪಘಾನ್ ಸರಕಾರಕ್ಕೆ ದೊಡ್ಡ ಹಿನ್ನಡೆಯಾಗಿದ್ದು ಸರಕಾರದ ಅಸ್ತಿತ್ವಕ್ಕೇ ಸಂಚಕಾರ ಬರುವ ಸಾಧ್ಯತೆಯಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಮಾರಕ, ವಿನಾಶಕಾರಿ ಹಂತಕ್ಕೆ ಪ್ರವೇಶಿಸಿದ ಅಪಘಾನ್ ಸಂಘರ್ಷ: ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಲಿಯೊನ್ಸ್

ಕಳೆದ ಒಂದು ತಿಂಗಳಲ್ಲಿ ತಾಲಿಬಾನ್ ಆಕ್ರಮಣದಿಂದ ಸುಮಾರು 1000ಕ್ಕೂ ಅಧಿಕ ನಾಗರಿಕರ ಹತ್ಯೆಯಾಗಿದ್ದು ಅಪಘಾನಿಸ್ತಾನದ ಸಂಷರ್ಘ ಹೊಸ, ವಿನಾಶಕಾರಿ ಮತ್ತು ಮಾರಕ ಹಂತ ಪ್ರವೇಶಿಸಿದೆ ಎಂದು ಅಪಘಾನಿಸ್ತಾನಕ್ಕೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಡೆಬೊರಾ ಲಿಯೋನ್ಸ್ ಹೇಳಿದ್ದಾರೆ.

ಅಪಘಾನಿಸ್ತಾನದಲ್ಲಿ ಈಗ ಬೇರೆ ರೀತಿಯ ಯುದ್ಧ ನಡೆಯುತ್ತಿದ್ದು ಸಿರಿಯಾದ ಸಂಘರ್ಷವನ್ನು ನೆನಪಿಸುತ್ತದೆ ಎಂದು ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆ ಭದ್ರತಾ ಸಮಿತಿಯ ವಿಶೇಷ ಸಭೆಯಲ್ಲಿ ಲಿಯೊನ್ಸ್ ಹೇಳಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕ, ಬ್ರಿಟನ್ ಮುಂತಾದ ಪ್ರಬಲ ರಾಷ್ಟ್ರಗಳು ತಾಲಿಬಾನ್ ನೇತೃತ್ವದ ಇಸ್ಲಾಮಿಕ್ ಎಮಿರೇಟ್ಸ್ ಸ್ಥಾಪನೆಯ ಪ್ರಯತ್ನವನ್ನು ಬೆಂಬಲಿಸದಿರಲು ನಿರ್ಧರಿಸಿವೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News