ನಾಗಾಸಾಕಿ ಮೇಲೆ ಪರಮಾಣು ಬಾಂಬ್ ದಾಳಿಗೆ 76 ವರ್ಷ:ಈಶಾನ್ಯ ಏಶ್ಯಾ ವಲಯ ಪರಮಾಣು ಮುಕ್ತವಾಗಲು ಜಪಾನ್ ಮುಂದಾಳತ್ವಕ್ಕೆ ಕರೆ

Update: 2021-08-09 17:54 GMT

ಟೋಕಿಯೊ, ಆ.9: ಪರಮಾಣು ಶಸ್ತ್ರಾಸ್ತ್ರಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಅಮೆರಿಕ ಮತ್ತು ರಶ್ಯ ಹೆಚ್ಚಿನ ಉಪಕ್ರಮ ಕೈಗೊಳ್ಳಬೇಕಾಗಿದೆ ಎಂದು ಜಪಾನಿನ ನಾಗಾಸಾಕಿ ನಗರದ ಮೇಯರ್ ಒತ್ತಾಯಿಸಿದ್ದಾರೆ. ನಾಗಾಸಾಕಿ ಮೇಲೆ ಅಮೆರಿಕದ ಪರಮಾಣು ಬಾಂಬ್ ದಾಳಿ ನಡೆದು 76 ವರ್ಷವಾದ ಹಿನ್ನೆಲೆಯಲ್ಲಿ ನಾಗಾಸಾಕಿ ಶಾಂತಿ ಉದ್ಯಾನವನದಲ್ಲಿ ಸೋಮವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಈಶಾನ್ಯ ಏಶ್ಯಾ ವಲಯವನ್ನು ಪರಮಾಣು ಮುಕ್ತವಾಗಿಸಲು ಜಪಾನ್ ಮುಂದಾಳತ್ವ ವಹಿಸಬೇಕು ಮತ್ತು ಈ ಮೂಲಕ ಜಪಾನನ್ನು ಅಮೆರಿಕದ ಅಣ್ವಸ್ತ್ರ ವ್ಯಾಪ್ತಿಯಿಂದ ಹೊರತರಲು ಕ್ರಮಕೈಗೊಳ್ಳಬೇಕು. ಪರಮಾಣು ಶಸ್ತ್ರಾಸ್ತ್ರ ನಿಷೇಧಿಸುವ 2017ರ ಪರಮಾಣು ಒಪ್ಪಂದಕ್ಕೆ ಜಪಾನ್ ತಕ್ಷಣ ಸಹಿಹಾಕಬೇಕು ಎಂದು ನಾಗಾಸಾಕಿ ಮೇಯರ್ ಟೊಮಿಹಿಸಾ ತೌ ಆಗ್ರಹಿಸಿದರು. 

ಪರಮಾಣು ನಿಶಸ್ತ್ರೀಕರಣದ ನಿಟ್ಟಿನಲ್ಲಿ ನಡೆಯುವ ಪ್ರಯತ್ನಗಳಿಂದ ಹಿಂದಡಿ ಇಟ್ಟಿರುವ ಪರಮಾಣು ಸಶಕ್ತ ರಾಷ್ಟ್ರಗಳಾದ ಅಮೆರಿಕ ಮತ್ತು ರಶ್ಯಾಗಳ ಉಪಕ್ರಮದ ಆತಂಕ ವ್ಯಕ್ತಪಡಿಸಿದ ಅವರು, ಪರಮಾಣು ಶಸ್ತ್ರಾಸ್ತ್ರ ಮುಕ್ತ ವಿಶ್ವನಿರ್ಮಾಣದತ್ತ ಸಾಗಬೇಕಿದೆ ಎಂದರು. ನಾಗಾಸಾಕಿ ಮೇಲಿನ ಪರಮಾಣು ದಾಳಿಯಲ್ಲಿ ಬದುಕುಳಿದ, ಈಗ ವೃದ್ಧಾಪ್ಯದ ಹಂತದಲ್ಲಿರುವರಿಗೆ ವೈದ್ಯಕೀಯ ಮತ್ತಿತರ ನೆರವು ಒದಗಿಸುವ ಪ್ರಕ್ರಿಯೆ ತ್ವರಿತಗತಿಯಲ್ಲಿ ಸಾಗುವಂತೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಟೊಮಿಹಿಸಾ ತೌ ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಪಾನ್ ಪ್ರಧಾನಿ ಯೊಶಿಹಿಡೆ ಸುಗಾ, ಪರಮಾಣು ನಿರಸ್ತ್ರೀಕರಣದ ವಿಷಯದಲ್ಲಿ ವಿಶ್ವದ ರಾಷ್ಟ್ರಗಳು ವಿಭಿನ್ನ ನಿಲುವು ಹೊಂದಿದ್ದು ಮಾತುಕತೆಯ ಮೂಲಕ ಪರಸ್ಪರ ವಿಶ್ವಾಸವೃದ್ಧಿಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಮುಂದಿನ ವರ್ಷದ ಪರಮಾಣು ಪ್ರಸರಣ ತಡೆ ಒಪ್ಪಂದದ ಸಮಾವೇಶದಲ್ಲಿ ಪರಮಾಣು ನಿಶಸ್ತ್ರೀಕರಣದ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿಯಾಗಬೇಕಿದೆ ಎಂದರು.

 ಬೆಳಿಗ್ಗೆ 11:02 ಗಂಟೆಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರೆಲ್ಲರೂ ಒಂದು ನಿಮಿಷ ಮೌನ ಆಚರಿಸುವ ಮೂಲಕ, 1945ರ ಆಗಸ್ಟ್ 9ರಂದು ಅಮೆರಿಕದ ಬಿ-29 ಬಾಂಬರ್ ವಿಮಾನ ಉದುರಿಸಿದ ಪರಮಾಣು ಬಾಂಬ್ ಸ್ಫೋಟದಿಂದ ಮೃತಪಟ್ಟ 70,000ಕ್ಕೂ ಅಧಿಕ ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದಕ್ಕೂ 3 ದಿನದ ಮೊದಲು ಜಪಾನ್ನ ಮತ್ತೊಂದು ನಗರ ಹಿರೋಶಿಮಾದ ಮೇಲೆ ಅಮೆರಿಕ ನಡೆಸಿದ್ದ ಬಾಂಬ್ದಾಳಿಯಲ್ಲಿ 1,40,000 ಮಂದಿ ಮೃತಪಟ್ಟಿದ್ದರು. ಆಗಸ್ಟ್ 15ರಂದು ಜಪಾನ್ ಶರಣಾಗತಿ ಘೋಷಿಸುವುದರೊಂದಿಗೆ ದ್ವಿತೀಯ ವಿಶ್ವಯುದ್ಧ ಸಮಾಪ್ತಿಯಾಗಿತ್ತು.

  
ಪರಮಾಣು ಶಸ್ತ್ರಾಸ್ತ್ರ ಹೊಂದುವುದು, ಉತ್ಪಾದಿಸುವುದು ಅಥವಾ ಇವುಗಳ ದಾಸ್ತಾನಿಗೆ ಅವಕಾಶ ನೀಡದಿರುವ ಕಾರ್ಯನೀತಿಯನ್ನು ಜಪಾನ್ ಹೊಂದಿದೆ. ಆದರೆ ಅಮೆರಿಕದ ಮಿತ್ರರಾಷ್ಟ್ರವಾಗಿರುವ ಜಪಾನ್ನಲ್ಲಿ ಅಮೆರಿಕದ 50,000 ಪಡೆಗಳ ಸೇನಾನೆಲೆ ಇದೆ ಮತ್ತು ಅಮೆರಿಕದ ಪರಮಾಣು ವ್ಯಾಪ್ತಿಯಡಿ ಜಪಾನ್ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News