ಕುಂದುಝ್ ನಗರ ತಾಲಿಬಾನ್ ವಶಕ್ಕೆ

Update: 2021-08-09 17:54 GMT

ಕಾಬೂಲ್, ಆ.9: ಅಪಘಾನಿಸ್ತಾನದ ಪ್ರಮುಖ ನಗರ ಕುಂದುಝ್ ನಗರವನ್ನು ತೀವ್ರ ಸಂಘರ್ಷದ ಬಳಿಕ ತಾಲಿಬಾನ್ಗಳು ವಶಪಡಿಸಿಕೊಂಡಿರುವುದಾಗಿ ಅಧಿಕೃತ ಮೂಲಗಳು ಹೇಳಿವೆ.

ಮಹಿಳೆಯರು, ಮಕ್ಕಳ ಸಹಿತ 14 ಮೃತದೇಹಗಳನ್ನು , 30ಕ್ಕೂ ಅಧಿಕ ಗಾಯಗೊಂಡವರನ್ನು ನಗರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಕುಂದುಝ್ ನಗರದ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಕುಂದುಝ್ ನಗರದ ಎಲ್ಲಾ ಸರಕಾರಿ ಕಚೇರಿಗಳು, ಕಟ್ಟಡಗಳು ಈಗ ತಾಲಿಬಾನ್ ನಿಯಂತ್ರಣದಲ್ಲಿದ್ದು, ಕಟ್ಟಡಗಳ ಮೇಲೆ ತಾಲಿಬಾನ್ ಧ್ವಜ ಹಾರಿಸಲಾಗಿದೆ. ಕುಂದುಝ್ ವಿಮಾನನಿಲ್ದಾಣದಲ್ಲಿರುವ ಸೇನಾ ನೆಲೆ ಹೊರತುಪಡಿಸಿ ಸಂಪೂರ್ಣ ನಗರದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದೆ ಎಂದು ಕುಂದುಝ್ ಪ್ರಾಂತ್ಯದ ಸಂಸದ ಅಮ್ರುದ್ದೀನ್ ವಾಲಿ ಹೇಳಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಕುಂದುಝ್ ನಗರ ಪತನವಾಗಿರುವುದನ್ನು ಸರಕಾರ ನಿರಾಕರಿಸುತ್ತಿದೆ. ಆದರೆ ತಾಲಿಬಾನ್ ಯೋಧರು ನಗರದೆಲ್ಲೆಡೆ ಸಂಚರಿಸುತ್ತಿದ್ದಾರೆ. ನಗರದಲ್ಲಿ ಅರಾಜಕತೆಯ ಪರಿಸ್ಥಿತಿ ನೆಲೆಸಿದ್ದು ಮನೆ, ಅಂಗಡಿ, ಕಚೇರಿ, ಮಾರುಕಟ್ಟೆಗಳಲ್ಲಿ ಬೆಂಕಿಯ ಹೊಗೆ ಇನ್ನೂ ಕಾಣಿಸುತ್ತಿದೆ. ಸ್ಥಳೀಯರು ಸುರಕ್ಷಿತ ಸ್ಥಳಕ್ಕೆ ಪಲಾಯನ ಮಾಡುತ್ತಿದ್ದಾರೆ ಎಂದು ಸ್ಥಳೀಯ ಪತ್ರಕರ್ತರೊಬ್ಬರು ವರದಿ ಮಾಡಿದ್ದಾರೆ. ಸುಮಾರು 2,70,000 ಜನಸಂಖ್ಯೆ ಇರುವ ಕುಂದುಝ್ ಪಟ್ಟಣ ಅಪಘಾನಿಸ್ತಾನದ ಪ್ರಾಕೃತಿಕ ಖನಿಜ ಸಂಪತ್ತಿನ ನೆಲೆಯಾಗಿರುವ ಉತ್ತರದ ಭಾಗಕ್ಕೆ ಹೆಬ್ಬಾಗಿಲಿನಂತಿದೆ.

 ಅಪಘಾನ್ ಕಮಾಂಡೋಗಳು ಹಾಗೂ ಸೇನೆ ಸಂಘಟಿತ ಹೋರಾಟ ನಡೆಸುತ್ತಿದ್ದು ಶತ್ರುಗಳನ್ನು ಹಿಮ್ಮೆಟ್ಟಿಸಲು ದೃಢ ಸಂಕಲ್ಪ ಮಾಡಲಾಗಿದೆ ಎಂದು ಅಪಘಾನ್ನ ಆಂತರಿಕ ಸಚಿವಾಲಯ ಹೇಳಿದೆ. ಆದರೆ, ಕುಂದುಝ್ ಮೇಲೆ ನಿಯಂತ್ರಣ ಸಾಧಿಸಿದ ಕೆಲವೇ ಗಂಟೆಗಳಲ್ಲಿ ತಾಲಿಬಾನ್ ಪಡೆಗಳು ಉತ್ತರದ ಮತ್ತೊಂದು ಪ್ರಾಂತೀಯ ರಾಜಧಾನಿ ಸರ್-ಎ-ಪುಲ್ನಲ್ಲೂ ಮುನ್ನಡೆ ಸಾಧಿಸಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News