ಈಜಿಪ್ಟ್:‌ ಸಶಸ್ತ್ರ ಪಡೆಗಳಿಂದ 13 ಉಗ್ರರ ಹತ್ಯೆ

Update: 2021-08-13 17:54 GMT

ಕೈರೋ, ಆ.13: ಪ್ರಕ್ಷುಬ್ಧ ಪರಿಸ್ಥಿತಿ ನೆಲೆಸಿರುವ ಸಿನಾಯ್ ಪರ್ಯಾಯ ದ್ವೀಪದಲ್ಲಿ ನಡೆದ ಸಂಘರ್ಷದಲ್ಲಿ 13 ಮಂದಿ ದಾಯೆಷ್ ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಈಜಿಪ್ಟ್ ನ ಸೇನಾಪಡೆ ಹೇಳಿದೆ.

 ಉತ್ತರ ಮತ್ತು ಕೇಂದ್ರ ಸಿನಾಯ್ನಲ್ಲಿ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಿರತವಾಗಿರುವ ಸಶಸ್ತ್ರ ಪಡೆಗಳು 13 ಉಗ್ರಗಾಮಿಗಳನ್ನು ಹತ್ಯೆ ಮಾಡಿವೆ. ಈ ಕಾರ್ಯಾಚರಣೆಯಲ್ಲಿ 9 ಯೋಧರು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ 15 ಸ್ವಯಂಚಾಲಿತ ರೈಫಲ್ಗಳು, ಮೋಟಾರ್ ಬೈಕ್, ಅಪಾರ ಪ್ರಮಾಣದ ಮದ್ದುಗುಂಡುಗಳು, ಬೈನಾಕ್ಯುಲರ್, ಮೊಬೈಲ್ ಫೋನ್ಗಳು, ವಿವಿಧ ದೇಶಗಳ ಕರೆನ್ಸಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಗುರುವಾರ ನೀಡಿದ ಹೇಳಿಕೆಯಲ್ಲಿ ಈಜಿಪ್ಟ್ ಸೇನೆ ಹೇಳಿದೆ.

ಸಿನಾಯ್ ಪರ್ಯಾಯ ದ್ವೀಪ ಪ್ರಾಂತ್ಯದಲ್ಲಿ ಹಲವಾರು ವರ್ಷಗಳಿಂದ ದಾಯೆಷ್ ಸಂಘಟನೆಯ ಉಗ್ರಗಾಮಿಗಳು ಮತ್ತು ಸೇನೆಯ ಮಧ್ಯೆ ಸಂಘರ್ಷ ಮುಂದುವರಿದಿದೆ. 2013ರಲ್ಲಿ ಸೇನೆ ನಡೆಸಿದ ಕ್ಷಿಪ್ರಕ್ರಾಂತಿಯಲ್ಲಿ ಅಧ್ಯಕ್ಷ ಮುಹಮ್ಮದ್ ಮುರ್ಸಿ ಪದಚ್ಯುತಗೊಂಡ ಬಳಿಕ ಈಜಿಪ್ಟ್ ಸೇನೆಯ ವಿರುದ್ಧದ ದಾಳಿಯನ್ನು ಉಗ್ರಗಾಮಿಗಳು ತೀವ್ರಗೊಳಿಸಿದ್ದಾರೆ. 2018ರ ಫೆಬ್ರವರಿಯಿಂದ ದಾಯೆಷ್ ಉಗ್ರರ ವಿರುದ್ಧ ದೇಶಾದ್ಯಂತ ಕಾರ್ಯಾಚರಣೆ ಆರಂಭವಾಗಿದೆ. ಸಿನಾಯ್ ಪ್ರಾಂತ್ಯದಲ್ಲೇ ಇದುವರೆಗೆ ಸುಮಾರು 1,073 ಶಂಕಿತ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News