ಟೆಹ್ರಾನ್ ಅಧಿವೇಶನದ ಬಗ್ಗೆ ಟ್ವೀಟ್:‌ ರಶ್ಯಾ, ಬ್ರಿಟನ್ ರಾಯಭಾರಿಗಳಿಗೆ ಇರಾನ್ ಸಮನ್ಸ್

Update: 2021-08-13 17:55 GMT

  ಟೆಹ್ರಾನ್, ಆ.13: ಮಿತ್ರರಾಷ್ಟ್ರಗಳ ನಿಯಂತ್ರಣದಲ್ಲಿದ್ದ ಸಂದರ್ಭ ಇರಾನ್ನ ಟೆಹ್ರಾನ್ನಲ್ಲಿ 1943ರಲ್ಲಿ ನಡೆದಿದ್ದ ಅಧಿವೇಶನದ ಫೋಟೋವನ್ನು ರಶ್ಯಾ ರಾಯಭಾರ ಕಚೇರಿಯ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ರಶ್ಯಾ ಮತ್ತು ಬ್ರಿಟನ್ ರಾಯಭಾರಿಗಳಿಗೆ ಗುರುವಾರ ಸಮನ್ಸ್ ನೀಡಲಾಗಿದೆ ಎಂದು ಇರಾನ್ನ ಸರಕಾರಿ ಮಾಧ್ಯಮ ವರದಿ ಮಾಡಿದೆ.

ಈ ಫೊಟೋ ಅತ್ಯಂತ ಅಪ್ರಸ್ತುತ ಎಂದು ಇರಾನ್ನ ನಿರ್ಗಮಿತ ವಿದೇಶ ಸಚಿವ ಮುಹಮ್ಮದ್ ಜವಾದ್ ಝರೀಫ್ ಬಣ್ಣಿಸಿದ್ದಾರೆ. ತಮ್ಮ ದೇಶ ವಿದೇಶೀಯರ ನಿಯಂತ್ರಣದಲ್ಲಿ ಇತ್ತು ಎಂಬುದನ್ನು ದೇಶದ ಜನತೆಗೆ ನೆನಪಿಸುವ ಉದ್ದೇಶ ಈ ಫೋಟೋದ ಹಿಂದೆ ಇರಬಹುದು ಎಂದು ಹಲವರು ಟ್ವಿಟರ್ ಗೆ ಪತ್ರ ಬರೆದು ಆಕ್ರೋಶ ಸೂಚಿಸಿರುವುದಾಗಿ ವರದಿ ಹೇಳಿದೆ.

 1943ರಲ್ಲಿ ಟೆಹ್ರಾನ್ ನಲ್ಲಿನ ರಶ್ಯಾದ ರಾಯಭಾರ ಕಚೇರಿಯಲ್ಲಿ ಅಮೆರಿಕದ ಅಧ್ಯಕ್ಷ ಫ್ರ್ಯಾಂಕ್ಲಿನ್ ರೂಸ್ವೆಲ್ಟ್, ಬ್ರಿಟನ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್, ಸೋವಿಯತ್ ಮುಖಂಡ ಜೋಸೆಫ್ ಸ್ಟಾಲಿನ್ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸುತ್ತಿರುವುದು ಮತ್ತು ಈ ಸಂದರ್ಭ ರಶ್ಯಾದ ರಾಯಭಾರಿ ಲೆವಾನ್ ಝಗರ್ಯಾನ್, ಬ್ರಿಟನ್ ನ ರಾಯಭಾರಿ ಸೈಮನ್ ಶೆರ್ಕ್ಲಿಫ್ ಉಪಸ್ಥಿತರಿರುವ ಫೋಟೋ ಇದಾಗಿದೆ. ಇದು ರಾಜತಾಂತ್ರಿಕ ಶಿಷ್ಟಾಚಾರ ಮತ್ತು ಇರಾನ್ ಜನತೆಯ ರಾಷ್ಟ್ರೀಯ ಹೆಮ್ಮೆಗೆ ತೋರಿದ ಅಗೌರವವಾಗಿದೆ ಎಂದು ಇರಾನ್ನ ನಿಯೋಜಿತ ವಿದೇಶ ಸಚಿವ ಹೊಸೈನ್ ಅಮೀರಬ್ದುಲ್ಲಾಹಿಯನ್ ಪ್ರತಿಕ್ರಿಯಿಸಿದ್ದಾರೆ.

  2ನೇ ವಿಶ್ವಯುದ್ಧದ ಸಂದರ್ಭ ನಾಝಿಗಳ ವಿರುದ್ಧ ಬ್ರಿಟನ್ ಮತ್ತು ರಶ್ಯಾ ಜತೆಯಾಗಿದ್ದವು ಎಂಬುದನ್ನು ನೆನಪಿಸುವ ಉದ್ದೇಶದಿಂದ ಮಾತ್ರ ಈ ಫೋಟೋ ಅಪ್ಲೋಡ್ ಮಾಡಿರುವುದಾಗಿ ರಶ್ಯಾ ರಾಯಭಾರಿ ಸ್ಪಷ್ಟಪಡಿಸಿದ್ದಾರೆ ಎಂದು ಇರಾನ್ನ ವಿದೇಶ ವ್ಯವಹಾರ ಇಲಾಖೆ ಹೇಳಿದೆ. ರಶ್ಯಾದೊಂದಿಗೆ ನಾವು ಸ್ನೇಹ ಸಂಬಂಧ ಹೊಂದಿದ್ದರೂ, ಫೋಟೋ ಪ್ರಕಟಿಸಿರುವ ಕ್ರಮ ಸ್ವೀಕಾರಾರ್ಹವಲ್ಲ ಎಂದು ವಿದೇಶ ವ್ಯವಹಾರ ಇಲಾಖೆ ಹೇಳಿದೆ. ಪೋಟೋ ಪ್ರಕಟಿಸಿದ್ದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ಬ್ರಿಟನ್ ರಾಯಭಾರಿ ಕೂಡಾ ಸ್ಪ್ಟಪಡಿಸಿದ್ದಾರೆ ಎಂದು ಇಲಾಖೆ ಹೇಳಿದೆ.

ಈ ಫೋಟೋದ ಹಿಂದೆ ಇರಾನ್ ವಿರೋಧಿ ಉದ್ದೇಶವೇನೂ ಇಲ್ಲ. ನಮ್ಮ ಮಿತ್ರರಾಗಿರುವ ಇರಾನ್ನ ಜನತೆಯ ಭಾವನೆಗೆ ಘಾಸಿ ಮಾಡುವ ಉದ್ದೇಶ ನಮಗಿಲ್ಲ ಎಂದು ರಶ್ಯಾ ರಾಯಭಾರ ಕಚೇರಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News