ಲಾಕ್ಡೌನ್ ಜಾರಿಗೊಳಿಸುವ ವೈದ್ಯರ ಸಲಹೆ ತಿರಸ್ಕರಿಸಿದ ಶ್ರೀಲಂಕಾ ಸರಕಾರ

Update: 2021-08-13 17:58 GMT
photo : twitter

ಕೊಲಂಬೋ, ಆ.13: ದೇಶದಲ್ಲಿ ಕೊರೋನ ಸೋಂಕು ಪ್ರಕರಣ ತೀವ್ರಗತಿಯಲ್ಲಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ತಕ್ಷಣದಿಂದ ಲಾಕ್ಡೌನ್ ಜಾರಿಗೊಳಿಸುವಂತೆ ವೈದ್ಯರು ಪದೇ ಪದೇ ನೀಡಿರುವ ಸಲಹೆ ಮತ್ತು ಎಚ್ಚರಿಕೆಯನ್ನು ಅಧಿಕಾರಿಗಳು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. 

ಕೊರೋನ ಸೋಂಕಿನ ಜತೆಗೆ ಹೆಚ್ಚು ಸಾಂಕ್ರಾಮಿಕವಾಗಿರುವ ಡೆಲ್ಟಾ ರೂಪಾಂತರಿತ ಸೋಂಕು ಪ್ರಕರಣ ಕಳೆದ 1 ತಿಂಗಳಿಂದ ದೇಶದಲ್ಲಿ ವಿಪರೀತವಾಗಿದ್ದು ದೈನಂದಿನ ಸರಾಸರಿ 3000 ಸೋಂಕು ಪ್ರಕರಣ, ದೈನಂದಿನ ಸರಾಸರಿ 100 ಸಾವಿನ ಪ್ರಕರಣ ದಾಖಲಾಗುತ್ತಿರುವ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವಾರ ಕೆಲವು ನಿರ್ಬಂಧಗಳನ್ನು ಬಿಗಿಗೊಳಿಸಲಾಗಿತ್ತು. ಸರಕಾರಿ ಕಾರ್ಯಕ್ರಮ, ಸಾರ್ವಜನಿಕ ಸಮಾರಂಭ, ಗುಂಪುಗೂಡುವುದು, ಅಂತರ್ ಪ್ರಾಂತ್ಯ ಪ್ರಯಾಣ ನಿಷೇಧಿಸಲಾಗಿದೆ. ಆದರೆ ಅಂಗಡಿ, ಮುಂಗಟ್ಟು ಸೇರಿದಂತೆ ಇತರ ಬಹುತೇಕ ಚಟುವಟಿಕೆಗಳಿಗೆ ಅವಕಾಶ ಮುಂದುವರಿಸಲಾಗಿದೆ.

ಆದರೆ ಸಂಪೂರ್ಣ ಲಾಕ್ಡೌನ್ ನ ಅಗತ್ಯವಿಲ್ಲ. ಸೋಂಕಿನ ವಿಷಯದಲ್ಲಿ ಸಲಹೆ ನೀಡಲು ನೇಮಿಸಲಾಗಿರುವ ವಿಶೇಷ ಆರೋಗ್ಯ ಸಮಿತಿ ನೀಡಿರುವ ಶಿಫಾರಸುಗಳನ್ನು ಪರಿಶೀಲಿಸಿ ಅದರಂತೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಪುಟದ ವಕ್ತಾರ ಜಯಂತ ಪಥಿರಾನ ಸುದ್ಧಿಗಾರರಿಗೆ ತಿಳಿಸಿದ್ದಾರೆ.

ಆದರೆ ಆಸ್ಪತ್ರೆಗಳಲ್ಲಿ ಈಗಾಗಲೇ ಆಮ್ಲಜನಕದ ಕೊರತೆಯಿದೆ. ಡೆಲ್ಟಾ ರೂಪಾಂತರಿತ ಸೋಂಕಿನ ಪ್ರಕರಣ ಉಲ್ಬಣಿಸಿದ್ದು ಆಮ್ಲಜನಕದ ಅಗತ್ಯವಿರುವ ರೋಗಿಗಳ ಪ್ರಮಾಣವೂ ತೀವ್ರಗತಿಯಲ್ಲಿ ಏರುತ್ತಿದೆ. ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿದ್ದು ಹಾಸಿಗೆಗಳು ಕಾಲಿಯಿಲ್ಲದ ಸ್ಥಿತಿಯಿದೆ ಎಂದು ವೈದ್ಯರ ಸಂಘಟನೆ ಅಧ್ಯಕ್ಷ ಡಾ. ಲಾಲ್ಕುಮಾರ್ ಫೆರ್ನಾಂಡೊ ಹೇಳಿರುವುದಾಗಿ ಅರಬ್ ನ್ಯೂಸ್ ವರದಿ ಮಾಡಿದೆ. ಗುರುವಾರ ದೇಶದಲ್ಲಿ 124 ಸಾವು ಸಂಭವಿಸಿದ್ದು ಮುಂದಿನ 2 ವಾರದಲ್ಲಿ ಡೆಲ್ಟಾ ರೂಪಾಂತರದ ಪರಿಣಾಮ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಶ್ರೀ ಜಯವರ್ದನೆಪುರ ವಿವಿಯ ರೋಗಾಣುಶಾಸ್ತ್ರ ವಿಭಾಗದ ನಿರ್ದೇಶಕ ಡಾ. ಚಂಡಿಮ ಜೀವಂಧರ ಗುರುವಾರ ಹೇಳಿದ್ದಾರೆ.

ಸೆಪ್ಟೆಂಬರ್ ಮಧ್ಯಭಾಗದ ವೇಳೆ ದೇಶದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಸರಕಾರ ಹೇಳುತ್ತಿದೆಯಾದರೂ, ನಿಧಾನಗತಿಯ ಲಸಿಕೀಕರಣದಿಂದ ಇದುವರೆಗೆ ದೇಶದ 21 ಮಿಲಿಯನ್ ಜನಸಂಖ್ಯೆಯ ಕೇವಲ 3.53 ಮಿಲಿಯನ್ ಜನರು ಮಾತ್ರ ಸಂಪೂರ್ಣ ಲಸಿಕೆ ಪಡೆದಿದ್ದಾರೆ ಎಂದು ವರದಿ ಹೇಳಿದೆ. ಶ್ರೀಲಂಕಾದಲ್ಲಿ ಕೊರೋನ ಸೋಂಕಿನ ಒಟ್ಟು ಪ್ರಕರಣ 3,42,000ಕ್ಕೆ ಏರಿದ್ದು 5,500ಕ್ಕೂ ಅಧಿಕ ಮಂದಿ ಮರಣ ಹೊಂದಿದ್ದಾರೆ ಎಂದು ಸರಕಾರ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News