ನೇಪಾಳ: ಪ್ರಮುಖ ಪ್ರತಿಪಕ್ಷ ಇಬ್ಭಾಗ

Update: 2021-08-19 17:32 GMT

ಕಠ್ಮಂಡು (ನೇಪಾಳ), ಆ. 19: ನೇಪಾಳದ ಪ್ರಧಾನ ಪ್ರತಿಪಕ್ಷ ಹಾಗೂ ದೇಶದ ಅತಿ ದೊಡ್ಡ ಕಮ್ಯುನಿಸ್ಟ್ ಪಕ್ಷವಾಗಿರುವ ಸಿಪಿಎನ್-ಯುಎಮ್‌ಎಲ್ ಅಧಿಕೃತವಾಗಿ ಇಬ್ಭಾಗವಾಗಿದೆ. ಭಿನ್ನಮತೀಯ ನಾಯಕ ಮಾಧವಕುಮಾರ್ ನೇಪಾಳ್ ನೇತೃತ್ವದ ಒಂದು ಬಣವು ತನ್ನನ್ನು ನೂತನ ರಾಜಕೀಯ ಪಕ್ಷವಾಗಿ ದಾಖಲಿಸಿಕೊಳ್ಳಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದೆ.

ರಾಜಕೀಯ ಪಕ್ಷಗಳು ವಿಭಜನೆಗೊಳ್ಳುವುದನ್ನು ಸುಲಭಗೊಳಿಸುವ ವಿವಾದಾತ್ಮಕ ಅಧ್ಯಾದೇಶವೊಂದಕ್ಕೆ ಸರಕಾರ ಬೆಂಬಲ ನೀಡಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಸಿಪಿಎನ್-ಯುಎಮ್‌ಎಲ್ (ಸೋಶಿಯಲಿಸ್ಟ್) ಎಂಬ ಹೆಸರಿನ ಹೊಸ ರಾಜಕೀಯ ಪಕ್ಷವನ್ನು ನೋಂದಾಯಿಸುವಂತೆ ಕೋರಿ ಮಾಧವಕುಮಾರ್ ನೇಪಾಳ ಬುಧವಾರ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇದಕ್ಕೂ ಮೊದಲು ಬುಧವಾರ, ಸಚಿವ ಸಂಪುಟದ ಶಿಫಾರಸಿನಂತೆ ದೇಶದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ರಾಜಕೀಯ ಪಕ್ಷಗಳ ಕಾಯೆ 2071ಕ್ಕೆ ತಿದ್ದುಪಡಿ ತರುವ ಅಧ್ಯಾದೇಶವನ್ನು ಹೊರಡಿಸಿದರು. ಇದು ರಾಜಕೀಯ ಪಕ್ಷಗಳು ವಿಭಜನೆಗೊಳ್ಳುವ ವಿಧಿವಿಧಾನಗಳನ್ನು ಸುಲಭಗೊಳಿಸುತ್ತದೆ.

ರಾಜಕೀಯ ಪಕ್ಷವೊಂದರ ಸಂಸದೀಯ ಪಕ್ಷ ಮತ್ತು ಕೇಂದ್ರೀಯ ಸಮಿತಿಯ ಶೇ. 20 ಅಥವಾ ಅದಕ್ಕಿಂತಲೂ ಹೆಚ್ಚು ಸದಸ್ಯರು ತಮ್ಮ ಮಾತೃ ಪಕ್ಷವನ್ನು ವಿಭಜಿಸಬಹುದು ಎಂದು ಅಧ್ಯಾದೇಶ ಹೇಳುತ್ತದೆ.

ತಿದ್ದುಪಡಿಗೂ ಮುನ್ನ ಪಕ್ಷವೊಂದನ್ನು ಒಡೆಯಲು ಸಂಸದೀಯ ಪಕ್ಷ ಮತ್ತು ಕೇಂದ್ರೀಯ ಸಮಿತಿಯ ಶೇ. 40 ಸದಸ್ಯರ ಬೆಂಬಲ ಬೇಕಾಗಿತ್ತು.

ಈ ಅಧ್ಯಾದೇಶವನ್ನು ಪ್ರಧಾನಿ ಶೇರ್ ಬಹಾದುರ್ ದೇವುಬ ನೇತೃತ್ವದ ಸರಕಾರ ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದೆ ಎಂದು ‘ದ ಹಿಮಾಲಯನ್ ಟೈಮ್ಸ್’ ವರದಿ ಮಾಡಿದೆ.

ಪ್ರಸಕ್ತ ಮೈತ್ರಿ ಸರಕಾರದ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಸಿಪಿಎನ್-ಯುಎಮ್‌ಎಲ್ ಪಕ್ಷದ ಮಾಧವಕುಮಾರ್ ನೇಪಾಳ-ಝಾಲನಾಥ್ ಖಾನಲ್ ಬಣಕ್ಕೆ ಈ ಅಧ್ಯಾದೇಶವು ನೆರವಾಗುವ ಸಾಧ್ಯತೆಯಿದೆ. ಸರಕಾರ ಮುಂದುವರಿಯಲು ಈ ಅಧ್ಯಾದೇಶ ಅಗತ್ಯವೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News