×
Ad

ಭಾರತದ ವಿಮಾನಗಳಿಗೆ ನಿಷೇಧ ಹೇರಿದ ಪಪುವ ನ್ಯೂಗಿನಿ

Update: 2021-08-24 23:01 IST

ಪೋರ್ಟ್ ಮೋರೆಸ್ಬಿ, ಆ.24: ದೇಶದಲ್ಲಿ ಜಾರಿಯಲ್ಲಿರುವ ಕೋವಿಡ್-19 ಪ್ರಯಾಣ ನಿಯಮವನ್ನು ಭಾರತದ ಹೈಕಮಿಷನ್ ನ ಸಿಬ್ಬಂದಿ ಉಲ್ಲಂಘಿಸಿ ವಂಚನೆ ಎಸಗಿದ ಹಿನ್ನೆಲೆಯಲ್ಲಿ ಭಾರತದ ವಿಮಾನಗಳಿಗೆ ಅನಿರ್ಧಿಷ್ಟ ಅವಧಿಯ ನಿಷೇಧ ವಿಧಿಸಲಾಗಿದೆ ಎಂದು ಪಪುವ ನ್ಯೂಗಿನಿಯ ಅಧಿಕಾರಿಗಳು ಹೇಳಿದ್ದಾರೆ. ‌

ಭಾರತದ ಹೈಕಮಿಷನ್ ನ ಸಿಬ್ಬಂದಿಗಳು ಹಲವು ಅನಧಿಕೃತ ಪ್ರವಾಸಿಗರನ್ನು (ಕೋವಿಡ್ ಪೊಸಿಟಿವ್ ಇದ್ದವರೂ ಸೇರಿದಂತೆ) ಪಪುವ ನ್ಯೂಗಿನಿಗೆ ತಲುಪಿಸುವ ಮೂಲಕ ಉದ್ದೇಶಪೂರ್ವಕವಾಗಿ ಮೋಸ ಮಾಡಿದ್ದಾರೆ ಎಂದು ದೇಶದ ಕೋವಿಡ್-19 ಕಾರ್ಯಪಡೆಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ. 

ಮಂಗಳವಾರ ಇಂಡೋನೇಶ್ಯಾದ ಮೂಲಕ ಪಪುವ ನ್ಯೂಗಿನಿ ವಿಮಾನನಿಲ್ದಾಣ ತಲುಪಿದ ಭಾರತದ ಬಾಡಿಗೆ ವಿಮಾನವೊಂದರಲ್ಲಿ ಅನುಮತಿಸಲ್ಪಟ್ಟ ಪ್ರಯಾಣಿಕರಿಗಿಂತ 30 ಮಂದಿ ಅಧಿಕ ಪ್ರಯಾಣಿಕರಿದ್ದರು. ಈ ಪ್ರಯಾಣಿಕರಿಗೆ ದೇಶ ಪ್ರವೇಶಿಸಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಮಟ್ಟದ ಮಾತುಕತೆ ನಡೆದಿದ್ದು 81 ಪ್ರಯಾಣಿಕರಿಗೆ ದೇಶ ಪ್ರವೇಶಿಸಲು ಅನುಮತಿ ನೀಡಲಾಗಿದೆ. 

ವಿಮಾನದಲ್ಲಿದ್ದ 4 ಪ್ರಯಾಣಿಕರ ಕೊರೋನ ಪರೀಕ್ಷೆಯ ವರದಿ ಪೊಸಿಟಿವ್ ಬಂದಿದೆ. ಈ ವಂಚನೆಯ ಕೃತ್ಯದಲ್ಲಿ ಭಾರತದ ಹೈಕಮಿಷನ್ ಉದ್ದೇಶಪೂರ್ವಕವಾಗಿ ಶಾಮೀಲಾಗಿದೆ ಎಂದು ಪೊಲೀಸ್ ಆಯುಕ್ತ ಡೇವಿಡ್ ಮ್ಯಾನ್ನಿಂಗ್ ಹೇಳಿದ್ದಾರೆ. ದೇಶದ ಜನತೆ ಮತ್ತು ಸರಕಾರಕ್ಕೆ ಅಗೌರವ ತೋರುವ ಈ ಕೃತ್ಯದ ಹಿನ್ನೆಲೆಯಲ್ಲಿ ಭಾರತದ ವಿಮಾನಗಳು ಹಾಗೂ ಇಂಡೋನೇಶ್ಯಾದ ಕಪಜೆಟ್, ಗರುಡಾ ಸಂಸ್ಥೆಯ ವಿಮಾನಗಳು ಪಪುವ ನ್ಯೂಗಿನಿ ವಾಯುಕ್ಷೇತ್ರವನ್ನು ಮುಂದಿನ ಸೂಚನೆಯವರೆಗೆ ಬಳಸುವಂತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News