ಅಮೆರಿಕ ನಿರ್ಮಿತ ಎಫ್-15 ಯುದ್ಧವಿಮಾನಗಳ ಪ್ರಥಮ ಕಂತು ಖತರ್ ಗೆ ರವಾನೆ

Update: 2021-08-26 17:27 GMT

ದೋಹಾ, ಆ.26: ಅಮೆರಿಕ ನಿರ್ಮಿತ, ಅತ್ಯಾಧುನಿಕ ಎಫ್-15 ಯುದ್ಧವಿಮಾನಗಳ ಪ್ರಥಮ ಕಂತನ್ನು ಬುಧವಾರ ಖತರ್ ಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಅಮೆರಿಕ ಮತ್ತು ಬೋಯಿಂಗ್ ಸಂಸ್ಥೆಗಳು ಖತರ್‌ ನ ಸಹಭಾಗಿತ್ವದಲ್ಲಿ ಈ ಯುದ್ಧವಿಮಾನಗಳನ್ನು ನಿರ್ಮಿಸುತ್ತಿದ್ದು ಬುಧವಾರ ಅಮೆರಿಕದ ಮಿಸೌರಿಯಲ್ಲಿನ ಬೋಯಿಂಗ್ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದ ಸಾಂಕೇತಿಕ ಕಾರ್ಯಕ್ರಮದಲ್ಲಿ ಖತರ್‌ ನ ರಕ್ಷಣಾ ಇಲಾಖೆಯ ಸಹಾಯಕ ಸಚಿವ ಖಾಲಿದ್ ಬಿನ್ ಮುಹಮ್ಮದ್ ಅಲ್ ಅಟಿಯಾಹ್ ಉಪಸ್ಥಿತರಿದ್ದರು . ರಕ್ಷಣೆಯ ಉದ್ದೇಶಕ್ಕೆ ಈ ಯುದ್ಧವಿಮಾನಗಳ ಬಳಕೆಯಾಗಲಿದೆ ಮತ್ತು ಇವು ಈ ಹಿಂದಿನ ಎಫ್-15 ವಿಮಾನಕ್ಕಿಂತ ಆಧುನಿಕ ಮತ್ತು ವೇಗದ ಚಲನೆಯನ್ನು ಹೊಂದಿದೆ ಎಂದು ಸಚಿವರು ಹೇಳಿದ್ದಾರೆ.

ಎಫ್-15 ಕ್ಯುಎ ವಿಮಾನಗಳ ಹಸ್ತಾಂತರ ಪ್ರಕ್ರಿಯೆ ಸಾಮರ್ಥ್ಯ ವೃದ್ಧಿಯಲ್ಲಿ ಮಾತ್ರವಲ್ಲ, ಸಹಭಾಗಿತ್ವ ವರ್ಧನೆಯಲ್ಲೂ ಅತೀ ಪ್ರಮುಖವಾಗಿದೆ ಎಂದು 9ನೇ ವಾಯುಪಡೆಯ ಕಮಾಂಡರ್ ಜನರಲ್ ಗ್ರೆಗ್ ಗಿಲಿಯಟ್ ಪ್ರತಿಕ್ರಿಯಿಸಿದ್ದಾರೆ.

  ಖತರ್ ಹಾಗೂ ಅಕ್ಕಪಕ್ಕದ ದೇಶಗಳಾದ ಸೌದಿ ಅರೆಬಿಯಾ, ಯುಎಇ, ಈಜಿಪ್ಟ್, ಬಹ್ರೇನ್ ನಡುವೆ ರಾಜಕೀಯ ಬಿಕ್ಕಟ್ಟು ಉಲ್ಬಣಿಸಿದ ಹಿನ್ನೆಲೆಯಲ್ಲಿ 2017ರಲ್ಲಿ ಅಮೆರಿಕ ಹಾಗೂ ಇತರ ಕೆಲವು ಯುರೋಪ್ ದೇಶಗಳಿಂದ ಯುದ್ಧವಿಮಾನ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಗಲ್ಫ್ ದೇಶಗಳು ಖತರ್ ಮೇಲೆ ನಿರ್ಬಂಧ ವಿಧಿಸಿದ ಬಳಿಕ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಸಜ್ಜುಗೊಂಡಿರುವ 30 ಯುದ್ಧವಿಮಾನಗಳ ಖರೀದಿಗೆ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ವೇಗ ಹಾಗೂ ಕಾರ್ಯಾಚರಣೆ ವಿಭಾಗದಲ್ಲಿ ಈ ವಿಮಾನಗಳು ಅತ್ಯುತ್ತಮ ಯುದ್ಧವಿಮಾನಗಳ ಸಾಲಿಗೆ ಸೇರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News