ಪ್ಯಾರಿಸ್: 2015/11 ದಾಳಿಯ ವಿಚಾರಣೆ ಆರಂಭ‌

Update: 2021-09-05 16:56 GMT

ಪ್ಯಾರಿಸ್, ಸೆ.5: ಫ್ರಾನ್ಸ್ ನ ಆಧುನಿಕ ಯುಗದ ಕಾನೂನು ಇತಿಹಾಸದಲ್ಲೇ ಅತ್ಯಂತ ಬೃಹತ್ ನ್ಯಾಯವಿಚಾರಣೆ ಎಂದು ಪರಿಗಣಿಸಲಾಗಿರುವ 2015ರ ನವೆಂಬರ್ನಲ್ಲಿ ನಡೆದ ದಾಳಿ ಪ್ರಕರಣದ ವಿಚಾರಣೆ ಬುಧವಾರ ಆರಂಭವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದಯೇಷ್ ಎಂಬ ಭಯೋತ್ಪಾದಕ ಗುಂಪಿನ ಸದಸ್ಯರು ಬಾರ್, ರೆಸ್ಟಾರೆಂಟ್ ಹಾಗೂ ಸಂಗೀತ ಕಾರ್ಯಕ್ರಮದ ಸ್ಥಳದ ಮೇಲೆ ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿ ಮತ್ತು ಗುಂಡಿನ ದಾಳಿಯಲ್ಲಿ 130 ಮಂದಿ ಹತರಾಗಿದ್ದರು.

 ಕೇಂದ್ರ ಪ್ಯಾರಿಸ್ನ ಇಲೆಡೆಲ ಸೈಟ್ನ ಚಾರಿತ್ರಿಕ ನ್ಯಾಯಾಲಯದಲ್ಲಿ 20 ಪ್ರತಿವಾದಿಗಳ ಪೈಕಿ 14 ಮಂದಿ ಮತ್ತು ಜೀವಂತವಾಗಿರುವ ಏಕೈಕ ದಾಳಿಕೋರ ಸಲೇಹ್ ಅಬ್ದೆಸ್ಲಾಮ್ ಉಪಸ್ಥಿತಿಯಲ್ಲಿ ನ್ಯಾಯವಿಚಾರಣೆ ಪ್ರಕ್ರಿಯೆ ಆರಂಭವಾಗಿದೆ. 2022ರ ಮೇ ತಿಂಗಳಿನವರೆಗೆ ನಡೆಯಲಿರುವ ನ್ಯಾಯ ವಿಚಾರಣೆಯಲ್ಲಿ ಸುಮಾರು 330 ನ್ಯಾಯವಾದಿಗಳು, 300 ಸಂತ್ರಸ್ತರು ಹಾಗೂ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆಯವರ ಹೇಳಿಕೆ ದಾಖಲಿಸಲಾಗುವುದು.

ಆತ್ಮಹತ್ಯಾ ಬಾಂಬ್ ದಾಳಿಕೋರರಲ್ಲಿ ಒಬ್ಬನಾಗಿದ್ದ ಅಬ್ದೆಸ್ಲಾಮ್ನ ಸೊಂಟಕ್ಕೆ ಸಿಕ್ಕಿಸಿದ್ದ ಬಾಂಬ್ ತಾಂತ್ರಿಕ ವೈಫಲ್ಯದಿಂದ ಸ್ಫೋಟಗೊಳ್ಳಲು ವಿಫಲವಾದ ಬಳಿಕ ಆತ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಆತನನ್ನು ಬ್ರಸೆಲ್ಸ್ ನಲ್ಲಿ ಬಂಧಿಸಲಾಗಿತ್ತು. ಇತರ 14 ಆರೋಪಿಗಳ ವಿಚಾರಣೆಯೂ ನಡೆಯುವ ನಿರೀಕ್ಷೆಯಿದೆ. ಇತರ 6 ಶಂಕಿತ ಆರೋಪಿಗಳ ಗೈರುಹಾಜರಿಯಲ್ಲಿ ವಿಚಾರಣೆ ನಡೆಯಲಿದೆ. ಇವರಲ್ಲಿ 5 ಮಂದಿ ಸಿರಿಯಾದ ಬಾಂಬ್ ದಾಳಿಯಲ್ಲಿ ಮೃತರಾಗಿರುವರೆಂದು ಶಂಕಿಸಲಾಗಿದೆ. ದಾಳಿಯ ಪ್ರಧಾನ ಸಂಚುಕೋರ ಬೆಲ್ಜಿಯಂ ಮೂಲದ ಅಬ್ದೆಲ್ ಹಮೀದ್ ಅಬೌದ್ ನನ್ನು ಘಟನೆ ನಡೆದ 5 ದಿನದ ಬಳಿಕ ಪ್ಯಾರಿಸ್ ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News