ಮಾಂಟೆನೆಗ್ರೊ: ಬಿಷಪ್ ಪದಗ್ರಹಣ ಕಾರ್ಯಕ್ರಮಕ್ಕೆ ಸ್ಥಳೀಯರ ವಿರೋಧ; ಪೊಲೀಸರೊಂದಿಗೆ ಘರ್ಷಣೆ

Update: 2021-09-05 17:04 GMT

ಪೊಡ್ಗೊರಿಕಾ, ಸೆ.5: ಆಗ್ನೇಯ ಯುರೋಪ್ ನ ಪುಟ್ಟ ದೇಶವಾಗಿರುವ ಮಾಂಟೆನೆಗ್ರೋದಲ್ಲಿ ಸರ್ಬಿಯಾದ ಸಾಂಪ್ರದಾಯಿಕ ಚರ್ಚ್ ನ ಬಿಷಪ್ ರ ಪದಗ್ರಹಣ ಕಾರ್ಯಕ್ರಮವನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆದಿದೆ ಎಂದು ವರದಿಯಾಗಿದೆ.


ಸರ್ಬಿಯಾದಿಂದ 2006ರಲ್ಲಿ ಸ್ವತಂತ್ರಗೊಂಡ ಮಾಂಟೆನೆಗ್ರೊ ದೇಶದಲ್ಲಿ ಸಾಂಪ್ರದಾಯಿಕ ಕ್ರಿಶ್ಚಿಯನ್ ಚರ್ಚ್ ಇರಬೇಕು ಎಂಬುದು ಸ್ಥಳೀಯರ ಆಶಯವಾಗಿದೆ. ಆದರೆ, ಸೆಟಿಂಜೆ ನಗರದಲ್ಲಿರುವ ಸರ್ಬಿಯಾದ ಸಾಂಪ್ರದಾಯಿಕ ಚರ್ಚ್ಗೆ ನೂತನ ಬಿಷಪ್ ನೇಮಿಸುವ ನಿರ್ಧಾರ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದು ತಮ್ಮ ದೇಶದ ಮೇಲೆ ಸರ್ಬಿಯಾದ ಪ್ರಭಾವವನ್ನು ಮುಂದುವರಿಸಿಕೊಂಡು ಹೋಗುವ ಹುನ್ನಾರ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ರವಿವಾರ ನೂತನ ಬಿಷಪರ ಪದಗ್ರಹಣ ಕಾರ್ಯಕ್ರಮ ಆಯೋಜಿಸಿದ್ದು ಇದನ್ನು ವಿರೋಧಿಸಿ ಶನಿವಾರ ಸೆಟಿಂಜೆಯಲ್ಲಿ ನೂರಾರು ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದರು. ಚರ್ಚ್ ನ ಸಮೀಪ ಸ್ಥಾಪಿಸಿದ್ದ ಬ್ಯಾರಿಕೇಡ್ಗಳನ್ನು ಕಿತ್ತೊಗೆದು ಪೊಲೀಸರತ್ತ ಕಲ್ಲೆಸೆದರು. 

‘ಇದು ಮಾಂಟೆನೆಗ್ರೋ, ಸರ್ಬೀಯವಲ್ಲ’ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು ಬಳಿಕ ಟಯರುಗಳು, ಕಸಕಡ್ಡಿ, ಮರದ ತುಂಡು, ಬೃಹತ್ ಕಲ್ಲುಗಳನ್ನು ರಾಶಿ ಹಾಕಿ, ಪದಗ್ರಹಣ ಕಾರ್ಯಕ್ರಮಕ್ಕೆ ತಡೆಯೊಡ್ಡಲು ರಸ್ತೆ ತಡೆ ನಡೆಸಿದರು. ರಸ್ತೆ ತಡೆಯ ಮುಂಭಾಗ ಮಾನವಸರಪಳಿ ರಚಿಸುವಂತೆ ಮಹಿಳೆಯರನ್ನು ಒತ್ತಾಯಿಸಿದರು. ಪೊಲೀಸರತ್ತ ಕಲ್ಲು ಮತ್ತು ಬಾಟಲಿಗಳನ್ನು ಎಸೆದಾಗ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು ಎಂದು ಅಲ್ಜಝೀರಾ ವರದಿ ಮಾಡಿದೆ.

 ಸುಮಾರು 6,20,000 ಜನಸಂಖ್ಯೆಯಿರುವ ಮಾಂಟೆನೆಗ್ರೋದಲ್ಲಿ 30% ಜನತೆ ಇನ್ನೂ ತಮ್ಮನ್ನು ಸರ್ಬಿಯಾ ಮೂಲದವರು ಎಂದು ಕರೆಸಿಕೊಳ್ಳಲು ಬಯಸುತ್ತಿದ್ದಾರೆ. ತಮ್ಮ ದೇಶದಲ್ಲಿರುವ ಸರ್ಬಿಯಾದ ಸಾಂಪ್ರದಾಯಿಕ ಚರ್ಚ್ನ ಮೂಲಕ ಇಲ್ಲಿ ಸರ್ಬಿಯನ್ ಪ್ರಭಾವ ಮುಂದುವರಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News