×
Ad

ತಾಲಿಬಾನ್ ಗೆ ಮಾನ್ಯತೆ ನೀಡುವ ವಿಷಯದಲ್ಲಿ ಆತುರ ಬೇಡ: ವಿಶ್ವಕ್ಕೆ ಟರ್ಕಿಯ ಸಲಹೆ

Update: 2021-09-07 23:20 IST
photo: twitter.com/MevlutCavusoglu

ಇಸ್ತಾನ್ಬುಲ್, ಸೆ.7: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡುವ ವಿಷಯದಲ್ಲಿ ಆತುರ ಪಡುವ ಅಗತ್ಯವಿಲ್ಲ ಎಂದು ಸಲಹೆ ನೀಡಿರುವ ಟರ್ಕಿ, ಕಾಬೂಲ್ ವಿಮಾನ ನಿಲ್ದಾಣದ ನಿರ್ವಹಣೆ ಕುರಿತು ತಾನು ಇನ್ನೂ ಸಮಾಲೋಚನೆ ಮುಂದುವರಿಸಿದ್ದು ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದಿದೆ. ‌

ಟಿವಿ ವಾಹಿಯೊಂದಿಗಿನ ಸಂದರ್ಶನದ ಸಂದರ್ಭ ಟರ್ಕಿಯ ವಿದೇಶ ವ್ಯವಹಾರ ಸಚಿವ ಮೆವ್ಲೆತ್ ಚವುಶೋಲು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ಈ ಸಲಹೆ ನೀಡಿದರು ಎಂದು ವರದಿಯಾಗಿದೆ. ಆತುರ ಪಡುವ ಅಗತ್ಯವಿಲ್ಲ. ಇದು ವಿಶ್ವಕ್ಕೆ ನಾವು ನೀಡುವ ಸಲಹೆಯಾಗಿದೆ. ಅಂತರಾಷ್ಟ್ರೀಯ ಸಮುದಾಯದೊಂದಿಗೆ ಸೇರಿ ಕಾರ್ಯನಿರ್ವಹಿಸಬೇಕಾಗಿದೆ . ಅಫ್ಗಾನ್ ನಲ್ಲಿ ರಚನೆಯಾಗುವ ನೂತನ ಸರಕಾರ ಎಲ್ಲಾ ಸಮುದಾಯದ ಪ್ರತಿನಿಧಿಗಳನ್ನು ಒಳಗೊಂಡಿರಬೇಕು. ಮಹಿಳೆಯರು ಹಾಗೂ ಜನಾಂಗೀಯ ಗುಂಪುಗಳಿಗೆ ಸಚಿವ ಹುದ್ದೆ ನೀಡಬೇಕು ಎಂದವರು ಹೇಳಿದ್ದಾರೆ.

ಪಂಜ್ಶಿರ್ ಪ್ರಾಂತ್ಯವೂ ಕೈವಶ ಆಗಿರುವುದರಿಂದ ಈಗ ಸಂಪೂರ್ಣ ಅಫ್ಗಾನ್ ತನ್ನ ನಿಯಂತ್ರಣದಲ್ಲಿದೆ ಎಂದು ಸೋಮವಾರ ತಾಲಿಬಾನ್ ಹೇಳಿಕೆ ನೀಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಚವುಶೋಲು, ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡುವ ಮುನ್ನ ಅಂತರಾಷ್ಟ್ರೀಯ ಸಮುದಾಯ ಕಾದುನೋಡುವ ತಂತ್ರ ಅನುಸರಿಸಬೇಕಿದೆ ಎಂದಿದ್ದಾರೆ. ಇದೇ ರೀತಿಯ ಅಭಿಪ್ರಾಯ ಕಳೆದ ಶುಕ್ರವಾರ ನಡೆದ ಯುರೋಪಿಯನ್ ಯೂನಿಯನ್ ಸಭೆಯಲ್ಲೂ ವ್ಯಕ್ತವಾಗಿತ್ತು.

 ಮುಂದಿನ ದಿನಗಳಲ್ಲಿ ಅಫ್ಘಾನ್ ನ ಮೂಲಭೂತವಾದಿ ಸಂಘಟನೆ(ತಾಲಿಬಾನ್) ಜತೆಗಿನ ಸಂಬಂಧದ ವಿಷಯದಲ್ಲಿ ಟರ್ಕಿ ಎಚ್ಚರಿಕೆಯ ಹೆಜ್ಜೆ ಇರಿಸುವ ಸೂಚನೆ ಇದಾಗಿದೆ ಎಂದು ವಿಶ್ಲೇಷಿಸಲಾಗಿದೆ.


ಮೊದಲು ಸುರಕ್ಷತೆ ಖಾತರಿಯಾಗಲಿ: ಟರ್ಕಿ

ಅಫ್ಘಾನ್ ನಿಂದ ಪ್ರಜೆಗಳ ತೆರವು ಕಾರ್ಯಾಚರಣೆಗಾಗಿ ಆಗಸ್ಟ್ ನಲ್ಲಿ ಕಾಬೂಲ್ ವಿಮಾನ ನಿಲ್ದಾಣದ ನಿಯಂತ್ರಣವನ್ನು ಪಡೆದಿದ್ದ ಅಮೆರಿಕ, ತೆರವು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ನಿಲ್ದಾಣದ ಮೇಲಿನ ನಿಯಂತ್ರಣ ಬಿಟ್ಟುಕೊಟ್ಟಿರುವುದಾಗಿ ಹೇಳಿತ್ತು. ಬಳಿಕ ವಿಮಾನ ನಿಲ್ದಾಣವನ್ನು ದುರಸ್ತಿಗೊಳಿಸಿ ನಿರ್ವಹಿಸಲು ತಾಲಿಬಾನ್ ಟರ್ಕಿಯ ನೆರವು ಕೋರಿತ್ತು.

 
ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನರಾರಂಭದ ಬಗ್ಗೆ ಟರ್ಕಿಯು ಖತರ್ ಮತ್ತು ಅಮೆರಿಕ ಜತೆಗೂಡಿ ಕಾರ್ಯನಿರ್ವಹಿಸುತ್ತಿದೆ. ಮಾನವೀಯ ನೆರವು ಒದಗಿಸಲು, ದೇಶದಲ್ಲಿ ಇನ್ನೂ ಅತಂತ್ರ ಸ್ಥಿತಿಯಲ್ಲಿರುವವರನ್ನು ತೆರವುಗೊಳಿಸಲು, ರಾಜತಾಂತ್ರಿಕ ಸಂಬಂಧದ ಮರುಸ್ಥಾಪನೆಗೆ ಕಾಬೂಲ್ ವಿಮಾನ ನಿಲ್ದಾಣ ಮತ್ತೆ ಕಾರ್ಯಾಚರಿಸುವ ಅಗತ್ಯವಿದೆ. ಆದರೆ ಇಲ್ಲಿ ಭದ್ರತೆ ಅತ್ಯಂತ ಪ್ರಮುಖ ವಿಷಯವಾಗಿದೆ. ತಾಲಿಬಾನ್ ಅಥವಾ ಅಫ್ಗಾನ್ ಪಡೆಗಳು ವಿಮಾನ ನಿಲ್ದಾಣದ ಹೊರಭಾಗದಲ್ಲಿ ಸುರಕ್ಷತೆ ಖಾತರಿಪಡಿಸಿದರೆ ಅಫ್ಗಾನ್ಗೆ ವಾಣಿಜ್ಯ ವಿಮಾನ ಹಾರಾಟ ಪುನರಾರಂಭಿಸಬಹುದು ಎಂದು ಟರ್ಕಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News