ಅಫ್ಘಾನ್ ನಿಂದ ಹೊರತೆರಳಲು ಅಡ್ಡಿ ಪಡಿಸುವುದಿಲ್ಲ ಎಂಬ ಹೇಳಿಕೆಗೆ ತಾಲಿಬಾನ್ ಬದ್ಧವಾಗಿರಲಿ: ಅಮೆರಿಕ ಆಗ್ರಹ‌

Update: 2021-09-07 17:52 GMT

ಖತರ್, ಸೆ.7: ಸೂಕ್ತ ಪ್ರಯಾಣ ದಾಖಲೆ ಪತ್ರ ಹೊಂದಿರುವವರು ಅಫ್ಘಾನ್ ನಿಂದ ಹೊರತೆರಳಲು ಅಡ್ಡಿಪಡಿಸುವುದಿಲ್ಲ ಎಂದು ತಾಲಿಬಾನ್ ಭರವಸೆ ನೀಡಿದೆ. ಇದಕ್ಕೆ ಅವರು ಬದ್ಧರಾಗಿರಬೇಕು ಎಂದು ಅಮೆರಿಕ ಆಗ್ರಹಿಸಿದೆ.

ಅಫ್ಘಾನ್ ನಲ್ಲಿ ಇನ್ನೂ ಅತಂತ್ರ ಸ್ಥಿತಿಯಲ್ಲಿರುವ ಕೆಲವರನ್ನು ಅಲ್ಲಿಂದ ಕ್ಷಿಪ್ರವಾಗಿ ಸ್ಥಳಾಂತರಿಸುವ ಬಗ್ಗೆ ಖತರ್ ನ ಮುಖಂಡರೊಂದಿಗೆ ದೋಹದಲ್ಲಿ ಮಾತುಕತೆ ನಡೆಸಿದ ಬಳಿಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅಮೆರಿಕದ ವಿದೇಶ ವ್ಯವಹಾರ ಸಚಿವ ಆ್ಯಂಟನಿ ಬ್ಲಿಂಕೆನ್ , ತಾಲಿಬಾನ್ ತನ್ನ ಮಾತಿಗೆ ಬದ್ಧವಾಗಿರಬೇಕು . ತಾಲಿಬಾನ್ ತನ್ನ ವಾಗ್ದಾನವನ್ನು ಪಾಲಿಸುತ್ತದೆಯೇ ಅಂತರ್ ರಾಷ್ಟ್ರೀಯ ಸಮುದಾಯ ಗಮನಿಸುತ್ತಿದೆ ಎಂದು, ಸುರಕ್ಷಿತವಾಗಿ ಹೊರವ ತೆರಳಲು ಅನುವು ಮಾಡಿಕೊಡುವ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯವನ್ನು ಉಲ್ಲೇಖಿಸಿ ಹೇಳಿದರು.


 ಅಫ್ಗಾನ್ ನಿಂದ ನೂರಾರು ಮಂದಿಯನ್ನು ತೆರವುಗೊಳಿಸಲು ಸನ್ನದ್ಧವಾಗಿದ್ದ ಕನಿಷ್ಟ 4 ವಿಮಾನಗಳು ಮಝರ್-ಎ-ಶರೀಫ್ ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿವೆ. ವಿಮಾನ ಮೇಲೇರಲು ತಾಲಿಬಾನ್ ಅವಕಾಶ ನೀಡಿಲ್ಲ. ವಿಮಾನದಲ್ಲಿದ್ದವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ ಎಂದು ಅಮೆರಿಕದ ವಿದೇಶ ವ್ಯವಹಾರ ಸಮಿತಿಯ ಸದಸ್ಯರೊಬ್ಬರು ಸೋಮವಾರ ನೀಡಿದ ಹೇಳಿಕೆಗೆ ಸ್ಪಷ್ಟನೆ ನೀಡಿದ ಬ್ಲಿಂಕೆನ್, ತಾಲಿಬಾನ್ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿಲ್ಲ. ಆದರೆ ವಿಮಾನದಲ್ಲಿದ್ದವರಲ್ಲಿ ಹಲವರಲ್ಲಿ ಸೂಕ್ತ ದಾಖಲೆ ಪತ್ರಗಳಿರಲಿಲ್ಲ ಎಂದರು.


ನಿಲ್ದಾಣದಲ್ಲಿ ಅಮೆರಿಕದ ಸಿಬಂದಿಗಳಿಲ್ಲದಿರುವುದು ಈ ಎಲ್ಲಾ ಸಮಸ್ಯೆಗೆ ಕಾರಣ. ದಾಖಲೆ ಪತ್ರ ಒದಗಿಸುವುದು, ಅದರ ಪರಿಶೀಲನೆ, ದಾಖಲೆಗಳ ಕ್ರಮಬದ್ಧತೆ , ಪ್ರಯಾಣಿಕರು ತಲುಪಬೇಕಿರುವ ಸ್ಥಳದ ಬಗ್ಗೆ ಪರಿಶೀಲಿಸುವ ವ್ಯವಸ್ಥೆ ಇರದಿರುವುದು ಸಮಸ್ಯೆಗೆ ಮೂಲ ಕಾರಣ ಎಂದು ಬ್ಲಿಂಕೆನ್ ಹೇಳಿದ್ದಾರೆ. ಅಫ್ಘಾನ್ ನಿಂದ ಅಮೆರಿಕ ಪ್ರಜೆಗಳು, ಮಿತ್ರರಾಷ್ಟ್ರದ ಪ್ರಜೆಗಳು ಹಾಗೂ ಅಪಾಯದಲ್ಲಿದ್ದ ಅಫ್ಗನ್ ಪ್ರಜೆಗಳ ಸುರಕ್ಷಿತ ತೆರವು ಕಾರ್ಯಾಚರಣೆಯಲ್ಲಿ ಖತರ್ ಪ್ರಮುಖ ಪಾತ್ರ ನಿರ್ವಹಿಸಿದೆ ಎಂದು ಅಮೆರಿಕ ಶ್ಲಾಘಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News