ಕಾಶ್ಮೀರ ಸಮಸ್ಯೆ ಇತ್ಯರ್ಥವಾಗದೆ ಭಾರತದೊಂದಿಗೆ ಶಾಂತಿ ಸಾಧ್ಯವಾಗದು: ಪಾಕ್
Update: 2021-09-07 23:23 IST
ಇಸ್ಲಮಾಬಾದ್, ಸೆ.7: ಭಾರತದೊಂದಿಗಿನ ಎಲ್ಲಾ ಸಮಸ್ಯೆಗಳಿಗೂ ಉತ್ತರ ಕಂಡುಕೊಳ್ಳುವ ಸಮಯ ಬಂದಿದೆ. ಕಾಶ್ಮೀರ ಸಮಸ್ಯೆ ಇತ್ಯರ್ಥವಾಗದೆ ಭಾರತದೊಂದಿಗೆ ಶಾಂತಿ ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಅಧ್ಯಕ್ಷ ಆರಿಫ್ ಆಲ್ವಿ ಸೋಮವಾರ ಹೇಳಿದ್ದಾರೆ.
ರಕ್ಷಣಾ ದಿನಾಚರಣೆ ಸಂದರ್ಭ ದೇಶದ ಜನತೆಗೆ ಸಂದೇಶ ನೀಡಿದ ಆಲ್ವಿ, ಕಾಶ್ಮೀರದ ಜನತೆಗೆ ನೀಡುತ್ತಿರುವ ಬೆಂಬಲವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದರು. ನೆರೆಹೊರೆಯಲ್ಲಿ ಆಗುತ್ತಿರುವ ಬೆಳವಣಿಗೆಯ ಬಗ್ಗೆ ಪಾಕಿಸ್ತಾನಕ್ಕೆ ಪೂರ್ಣ ಅರಿವು ಇದೆ ಮತ್ತು ಈ ವಲಯದಲ್ಲಿ ಶಾಂತಿಯನ್ನು ಕದಡುವ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ನಾವು ಸನ್ನದ್ಧರಾಗಿದ್ದೇವೆ ಎಂದವರು ಹೇಳಿದರು.
ಇದೇ ಸಂದರ್ಭ ಮಾತನಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯದಲ್ಲಿ ಸೂಚಿಸಿರುವಂತೆ, ಕಾಶ್ಮೀರದ ಜನತೆಗೆ ಸಲ್ಲಬೇಕಿರುವ ಹಕ್ಕು ಮತ್ತು ಸ್ವಯಂ ನಿರ್ಧಾರದ ಹಕ್ಕನ್ನು ಭಾರತ ತಕ್ಷಣ ನೀಡಬೇಕು ಎಂದು ಆಗ್ರಹಿಸಿದರು.