ನದಿಯಲ್ಲಿ ಮೃತದೇಹ ತೇಲಿಬಂದ ಪ್ರಕರಣ: ಇಥಿಯೋಪಿಯಾ ರಾಯಭಾರಿಗೆ ಖಂಡನೆ ಸಲ್ಲಿಸಿದ ಸುಡಾನ್

Update: 2021-09-08 17:04 GMT

ಕಾರ್ಟೂಮ್, ಸೆ.8: ಇಥಿಯೋಪಿಯಾದಿಂದ ಸುಡಾನ್ ಗೆ ಹರಿದು ಬರುವ ನದಿ ನೀರಿನಲ್ಲಿ 29 ಮೃತದೇಹ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಥಿಯೋಪಿಯಾ ರಾಯಭಾರಿಯನ್ನು ಕರೆಸಿಕೊಂಡು ಖಂಡನೆ ಸೂಚಿಸಲಾಗಿದೆ ಎಂದು ಸುಡಾನ್ ಸರಕಾರದ ಮೂಲಗಳು ಹೇಳಿವೆ.

 ಸೆಟಿಟ್ ನದಿಯ ಸುಡಾನ್ ಭಾಗದಲ್ಲಿ ಜುಲೈ 26ರಿಂದ ಆಗಸ್ಟ್ 8ರವರೆಗಿನ ಅವಧಿಯಲ್ಲಿ 29 ಮೃತದೇಹ ಪತ್ತೆಯಾಗಿದೆ. ಇಥಿಯೋಪಿಯಾದ ಟಿಗ್ರೆ ಜನಾಂಗೀಯ ಸಮುದಾಯಕ್ಕೆ ಸೇರಿದವರ ಮೃತದೇಹ ಇವು ಎಂದು ಪೂರ್ವ ಸುಡಾನ್ ನ ವಡಲ್ ಹುಲಾಯ್ವಾ ಪ್ರದೇಶದಲ್ಲಿ ನೆಲೆಸಿರುವ ಇಥಿಯೋಪಿಯನ್ನರು ಗುರುತಿಸಿದ್ದಾರೆ. ಸುಡಾನ್ ಗೆ ಇಥಿಯೋಪಿಯಾದ ರಾಯಭಾರಿಯನ್ನು ಆಗಸ್ಟ್ 30ರಂದು ಕರೆಸಿಕೊಂಡು ಈ ಮಾಹಿತಿ ನೀಲಾಗಿದೆ ಎಂದು ಮೂಲಗಳು ಹೇಳಿವೆ.

 ಸೆಟಿಟ್ ನದಿ ಇಥಿಯೋಪಿಯಾ, ಎರೀಟ್ರಿಯಾ ಮತ್ತು ಸುಡಾನ್ ಈ ಮೂರು ದೇಶಗಳಲ್ಲಿ ಹರಿಯುತ್ತದೆ. ಇಥಿಯೋಪಿಯಾದ ಉತ್ತರದಲ್ಲಿರುವ ಟಿಗ್ರೆ ವಲಯದಲ್ಲಿ ನಡೆಯುತ್ತಿರುವ ಅಂತರ್ಯುದ್ಧ ಹಾಗೂ ಬ್ಲೂ ನೈಲ್ ನದಿಗೆ ಇಥಿಯೋಪಿಯಾ ಕಟ್ಟುತ್ತಿರುವ ಬೃಹತ್ ಜಲವಿದ್ಯುತ್ ಅಣೆಕಟ್ಟಿಗೆ ಸಂಬಂಧಿಸಿ ಇಥಿಯೋಪಿಯಾ-ಸುಡಾನ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ. ಟಿಗ್ರೆ ಅಂತರ್ಯುದ್ಧದ ಪರಿಣಾಮ ಸಾವಿರಾರು ಮಂದಿ ಇಥಿಯೋಪಿಯಾದಿಂದ ಸುಡಾನ್ ಗೆ ಪಲಾಯನ ಮಾಡುತ್ತಿದ್ದಾರೆ ಎಂದುಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News