ವಿಶ್ವಸಂಸ್ಥೆಯ ಮಹಾಧಿವೇಶನ: 24ರಂದು ಮೋದಿ ಭಾಷಣ; 109 ರಾಷ್ಟ್ರಗಳು ಭಾಗಿ

Update: 2021-09-14 18:19 GMT

ನ್ಯೂಯಾರ್ಕ್, ಸೆ.14: ಮುಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್,ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮಾರಿಸನ್ ಖುದ್ದಾಗಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ. ಈ ಅಧಿವೇಶನದಲ್ಲಿ 109ಕ್ಕೂ ಅಧಿಕ ರಾಷ್ಟ್ರಗಳ ವರಿಷ್ಠರು ಪಾಲ್ಗೊಳ್ಳಲಿದ್ದಾರೆ.

ಸೆಪ್ಟೆಂಬರ್ 25ರಂದು ಬೆಳಗ್ಗೆ ವಿಶ್ವಸಂಸ್ಥೆಯ ಮಹಾಧಿವೇಶನದ ಸಭಾಭವನದಲ್ಲಿ ಪ್ರಧಾನಿ ಮೋದಿಯವರು ವಿಶ್ವನಾಯಕರನ್ನುದ್ದೇಶಿಸಿ ಭಾಷಣ ಮಾಡಲಿರುವರು. ಸೆಪ್ಟೆಂಬರ್ 24ರಂದು ಅವರು ಬೈಡೆನ್ ಆತಿಥ್ಯದಲ್ಲಿ ವಾಶಿಂಗ್ಟನ್ನಲ್ಲಿ ನಡೆಯಲಿರುವ ಕ್ವಾಡ್ (ಅಮೆರಿಕ, ಆಸ್ಟ್ರೇಲಿಯ,ಜಪಾನ್,ಭಾರತ) ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವರು.
 
ಕೋವಿಡ್-19ನಿಂದ ಚೇತರಿಸಿಕೊಳ್ಳುವ ಆಶಾವಾದದೊಂದಿಗೆ ಸುಸ್ಥಿರತೆಯ ಪುನರ್ನಿರ್ಮಾಣ, ಭೂಗ್ರಹದ ಅಗತ್ಯಗಳಿಗೆ ಸ್ಪಂದಿಸುವುದು, ಜನತೆಯ ಹಕ್ಕುಗಳಿಗೆ ಗೌರವ ಹಾಗೂ ವಿಶ್ವಸಂಸ್ಥೆಗೆ ಮರುಚೈತನ್ಯ ನೀಡುವುದು’ ಈ ವರ್ಷದ ಮಹಾಧಿವೇಶನದ ಪ್ರಮುಖ ಚರ್ಚಾ ವಿಷಯವಾಗಿರುವುದು ಎಂದು ವಿಶ್ವಸಂಸ್ಥೆಯಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
 ‌
ವಿಶ್ವಸಂಸ್ಥೆಯ ಮಹಾಧಿವೇಶನದ ಭಾಷಣಕಾರರ ಎರಡನೆ ತಾತ್ಕಾಲಿಕಪಟ್ಟಿಯ ಪ್ರಕಾರ 109 ರಾಷ್ಟ್ರಗಳ ಗಣ್ಯರು ಖುದ್ದಾಗಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ ಹಾಗೂ ಸುಮಾರು 60 ಮಂದಿ ಪೂರ್ವಭಾವಿಯಾಗಿ ರಿಕಾರ್ಡ್ ಮಾಡಲಾದ ವಿಡಿಯೋದ ಮೂಲಕ ಹೇಳಿಕೆಗಳನ್ನು ನೀಡಲಿದ್ದಾರೆ.
 
193 ಸದಸ್ಯ ಬಲದ ವಿಶ್ವಸಂಸ್ಥೆಯಲ್ಲಿ ಅಮೆರಿಕ ಅಧ್ಯಕ್ಷರಾಗಿ ಬೈಡೆನ್ ಇದೇ ಮೊದಲ ಬಾರಿಗೆ ಭಾಷಣ ಮಾಡಲಿದ್ದಾರೆ. ಬ್ರೆಝಿಲ್ ಅಧಿವೇಶನದ ಅಗ್ರ ಭಾಷಣಕಾರನಾಗಿದ್ದರೆ, ಅಫ್ಘಾನಿಸ್ತಾನವು ಕೊನೆಯದಾಗಿ ಭಾಷಣ ಮಾಡಲಿದೆ.

ಮಹಾ ಅಧಿವೇಶನದಲ್ಲಿ ಅಫ್ಘಾನ್ ಪ್ರತಿನಿಧಿ ಭಾಷಣ
 
ವಿಶ್ವಸಂಸ್ಥೆಯ ಮಹಾಧಿವೇಶನದ ಕೊನೆಯದಿನದಂದು ಅಫ್ಘಾನಿಸ್ತಾನದ ರಾಯಭಾರಿ ಅವರು ಭಾಷಣ ಮಾಡಲಿದ್ದಾರೆ. ವಿಶ್ವಸಂಸ್ಥೆಯಲ್ಲಿ ಪ್ರಸಕ್ತ ಅಫ್ಘಾನಿಸ್ತಾನದ ಪ್ರತಿನಿಧಿಯಾಗಿರುವ ಗುಲಾಂ ಇಸಾಕ್ಝಾಯ್ ಅವರನ್ನು 2021ರ ಜೂನ್ನಲ್ಲಿ ಆಗಿನ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ನೇಮಕ ಮಾಡಿದ್ದರು. ಆದರೆ ಇಸಾಕ್ಝಾಯ್ ಅವರ ಸ್ಥಾನಮಾನವನ್ನು ವಿರೋಧಿಸಿ ತಾಲಿಬಾನ್ ಈವರೆಗೆ ಯಾವುದೇ ಬಹಿರಂಗ ಹೇಳಿಕೆಯನ್ನು ನೀಡಿಲ್ಲ.

ವಿಶ್ವಸಂಸ್ಥೆಯ 76ನೇ ಮಹಾಧಿವೇಶನವು ಸೆಪ್ಟೆಂಬರ್ 21ರಂದು ಆರಂಭಗೊಳ್ಳಲಿದೆ. ಮಾಲ್ಡೀವ್ಸ್ ನ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹೀದ್ ಅವರು ಈ ವರ್ಷವಿಡೀ ಅಧಿವೇಶನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News