ಬ್ರಿಟನ್: ತೈಲ ಟ್ಯಾಂಕರ್ ಚಲಾಯಿಸಲು ಯೋಧರ ಬಳಕೆ

Update: 2021-09-29 17:59 GMT

ಲಂಡನ್, ಸೆ.29: ಬ್ರಿಟನ್ನಲ್ಲಿ ಲಾರಿ ಚಾಲಕರ ಕೊರತೆಯಿಂದ ಪೆಟ್ರೋಲ್ ಪಂಪ್ಗಳಿಗೆ ತೈಲ ಸಾಗಾಟಕ್ಕೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಸೇನಾ ಟ್ಯಾಂಕರ್ ಚಾಲಕರ ನೆರವನ್ನು ಪಡೆಯಲಾಗಿದೆ ಎಂದು ಬ್ರಿಟನ್ ಸರಕಾರ ಹೇಳಿದೆ.

‌ಸುಮಾರು 150 ಯೋಧರ ತಂಡವನ್ನು ರಚಿಸಲಾಗಿದ್ದು ಇವರು ಶೀಘ್ರವೇ ತೈಲ ಸಾಗಿಸಲು ನೆರವಾಗಲಿದ್ದಾರೆ ಎಂದು ಬ್ರಿಟನ್ನ ಉದ್ಯಮ ಸಚಿವ ಕ್ವಾಸಿ ಕ್ವರ್ಟ್ರೆಂಗ್ ಹೇಳಿದ್ದಾರೆ. ಕಳೆದ ಹಲವು ದಿನಗಳು ಕಷ್ಟದ ದಿನಗಳಾಗಿದ್ದು ಮಾರುದ್ದದ ಸರತಿ ಸಾಲು ಸಾಮಾನ್ಯ ದೃಶ್ಯವಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸುತ್ತಿದ್ದು ಸಾಕಷ್ಟು ತೈಲ ಪೂರೈಸಲು ವ್ಯವಸ್ಥೆ ಮಾಡಲಾಗಿದೆ ಎಂದವರು ಹೇಳಿದ್ದಾರೆ.
     
ಈ ಮಧ್ಯೆ, ಪರಿಸ್ಥಿತಿ ಸುಧಾರಿಸುತ್ತಿದ್ದು ಜನತೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಭರವಸೆ ನೀಡಿದ ಹೊರತಾಗಿಯೂ ಪೆಟ್ರೋಲ್ ಪಂಪ್ಗಳ ಎದುರು ವಾಹನಗಳ ದೀರ್ಘ ಸರತಿ ಸಾಲು ಸಾಮಾನ್ಯ ದೃಶ್ಯವಾಗಿದೆ . ಬ್ರಿಟನ್ನಲ್ಲಿ ಸುಮಾರು 1 ಲಕ್ಷ ಚಾಲಕರ ಕೊರತೆಯಿದ್ದು ಇದೇ ಸ್ಥಿತಿ ಮುಂದುವರಿದರೆ ತೈಲದ ಕೊರತೆ ಇನ್ನಷ್ಟು ಹೆಚ್ಚಲಿದ್ದು ಕ್ರಿಸ್ಮಸ್ ಸಂದರ್ಭ ತೈಲದ ದರ ಗಗನಕ್ಕೇರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಲಾರಿ ಚಾಲಕರ ಕೊರತೆಯಿಂದಾಗಿ ತನ್ನ ಸುಮಾರು ಶೇ.37%ರಷ್ಟು ಪೆಟ್ರೋಲ್ ಬಂಕ್ಗಳಲ್ಲಿ ತೈಲ ಖಾಲಿಯಾಗಿದೆ ಎಂದು ಪೆಟ್ರೋಲ್ ರಿಟೈಲರ್ಸ್ ಅಸೋಸಿಯೇಷನ್(ಪಿಆರ್ಎ) ಹೇಳಿದೆ.
 
ತೈಲ ಕೊರತೆಯು ವಿಶ್ವದ 5ನೇ ಬೃಹತ್ ಅರ್ಥವ್ಯವಸ್ಥೆಯಾಗಿರುವ ಬ್ರಿಟನ್ನಲ್ಲಿ ಗೊಂದಲ, ಅವ್ಯವಸ್ಥೆಗೆ ಕಾರಣವಾಗಿದ್ದು ಸೂಪರ್ ಮಾರ್ಕೆಟ್ಗಳಲ್ಲೂ ಸರಕುಗಳು ಕಾಲಿಯಾಗುತ್ತಿವೆ. ನೈಸರ್ಗಿಕ ಅನಿಲದ ದರವೂ ಹೆಚ್ಚಿರುವುದರಿಂದ ಸಮಸ್ಯೆ ಇನ್ನಷ್ಟು ತೀವ್ರವಾಗಿದೆ. ಈ ವರ್ಷದ ಆರಂಭದಿಂದ ಬ್ರಿಟನ್ ಯುರೋಪಿಯನ್ ಯೂನಿಯನ್(ಇಯು)ನ ಸಾಮಾನ್ಯ ಮಾರ್ಕೆಟ್ ವ್ಯವಸ್ಥೆಯಿಂದ ಹೊರಬಂದ ಹಿನ್ನೆಲೆಯಲ್ಲಿ ಇಯು ಸದಸ್ಯ ರಾಷ್ಟ್ರಗಳ ಚಾಲಕರನ್ನು ನೇಮಿಸಿಕೊಳ್ಳಲು ತಡೆಯಾಗಿದೆ. ಇದೀಗ ಸಮಸ್ಯೆಯ ನಿವಾರಣೆಗಾಗಿ ತಾತ್ಕಾಲಿಕ ವೀಸಾದಡಿ 5000 ವಿದೇಶಿ ಚಾಲಕರನ್ನು ನೇಮಿಸಿಕೊಳ್ಳುವುದಾಗಿ ಸರಕಾರ ಹೇಳಿದೆ. ಆದರೆ 3 ತಿಂಗಳ ತಾತ್ಕಾಲಿಕ ವೀಸಾ ಅತ್ಯಂತ ಕಡಿಮೆ ಅವಧಿಯಾಗಿರುವದರಿಂದ ವಿದೇಶಿ ಚಾಲಕರು ಆಸಕ್ತಿ ತೋರುವ ಸಾಧ್ಯತೆಯಿಲ್ಲ . ಜೊತೆಗೆ ತೈಲ ಸಾಗಿಸುವ ಲಾರಿಗಳನ್ನು ಚಲಾಯಿಸಲು ತರಬೇತಿ, ಲೈಸೆನ್ಸ್ ಮುಂತಾದ ಪ್ರಕ್ರಿಯೆ ಅಗತ್ಯವಿರುವುದರಿಂದ ದೇಶದ ತೈಲ ಬಿಕ್ಕಟ್ಟು ಶೀಘ್ರದಲ್ಲೇ ಬಗೆಹರಿಯುವ ಸಾಧ್ಯತೆ ಕಡಿಮೆ ಎಂದು ಪೆಟ್ರೋಲ್ ಪಂಪ್ ನಿರ್ವಾಹಕರ ಸಂಘಟನೆ, ಚಿಲ್ಲರೆ (ರಿಟೇಲ್) ತೈಲ ಮಾರಾಟಗಾರರ ಸಂಘಟನೆ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News