×
Ad

ಒತ್ತಡ ಬೇಡ, ಸಹಕಾರ ಸಂಬಂಧ ಬೆಳೆಸಿ: ಅಂತರಾಷ್ಟ್ರೀಯ ಸಮುದಾಯ್ಕೆ ಅಫ್ಘಾನ್ ವಿದೇಶ ಸಚಿವರ ಆಗ್ರಹ

Update: 2021-10-12 23:41 IST

ದೋಹಾ, ಅ.12: ಜಾಗತಿಕ ಸಮುದಾಯವು ಅಫ್ಘಾನಿಸ್ತಾನದೊಂದಿಗೆ ಉತ್ತಮ ಸಹಕಾರ ಸಂಬಂಧ ಆರಂಭಿಸುವ ಅಗತ್ಯವಿದೆ ಎಂದು ಅಫ್ಘಾನಿಸ್ತಾನದ ಹಂಗಾಮಿ ವಿದೇಶ ವ್ಯವಹಾರ ಸಚಿವ ಮುಲ್ಲಾ ಅಮೀರ್‌ಖಾನ್ ಮುತ್ತಖಿ ಹೇಳಿದ್ದಾರೆ. ಆದರೆ ಇದೇ ವೇಳೆ, ಬಾಲಕಿಯರ ಶಿಕ್ಷಣದ ಬಗ್ಗೆ ಬದ್ಧತೆಯನ್ನು ದೃಢಪಡಿಸುವ ಕುರಿತ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಲಿಲ್ಲ.

ಖತರ್‌ನ ದೋಹ ಇನ್‌ಸ್ಟಿಟ್ಯೂಟ್ ಫಾರ್ ಗ್ರಾಜುವೇಟ್ ಸ್ಟಡೀಸ್‌ನಲ್ಲಿ ಸೆಂಟರ್ ಫಾರ್ ಕಾನ್‌ಫ್ಲಿಕ್ಟ್ ಆ್ಯಂಡ್ ಹ್ಯುಮಾನಿಟೇರಿಯನ್ ಸ್ಟಡೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ,  ಬಾಲಕಿಯರ ಶಿಕ್ಷಣಕ್ಕೆ ಸೂಕ್ತ ವ್ಯವಸ್ಥೆ ರೂಪಿಸಲು ಇನ್ನಷ್ಟು ಸಮಯಾವಕಾಶದ ಅಗತ್ಯವಿದೆ ಎಂದರು.

ಜಾಗತಿಕ ಸಮುದಾಯ ಅಫ್ಘಾನಿಸ್ತಾನದೊಂದಿಗೆ ಉತ್ತಮ ಸಹಕಾರ ಸಂಬಂಧ ಆರಂಭಿಸಿದರೆ ನಮಗೆ ಅಭದ್ರತೆಯ ಭಾವನೆ ದೂರವಾಗಿ ಜಾಗತಿಕ ಸಮುದಾಯದೊಂದಿಗೆ ರಚನಾತ್ಮಕವಾಗಿ ವ್ಯವಹರಿಸಲು ಸಾಧ್ಯವಾಗುತ್ತದೆ. ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ಸ್ ಸರಕಾರ ಆಡಳಿತಕ್ಕೆ ಬಂದು ಕೆಲವು ವಾರ ಮಾತ್ರ ಕಳೆದಿದೆ. ಅಂತರಾಷ್ಟ್ರೀಯ ಸಮುದಾಯ 20 ವರ್ಷದಿಂದ ಅಫ್ಘಾನ್‌ನಲ್ಲಿ ಜಾರಿಗೊಳಿಸಲು ಸಾಧ್ಯವಾಗದ ಕಾರ್ಯವನ್ನು ಕೆಲವೇ ವಾರಗಳಲ್ಲಿ ನಾವು ಜಾರಿಗೊಳಿಸಲು ಸಾಧ್ಯವೇ? ಎಂದವರು ಪ್ರಶ್ನಿಸಿದರು. ಅವರಿಗೆ ಸಾಕಷ್ಟು ಆರ್ಥಿಕ ಸಂಪನ್ಮೂಲಗಳಿತ್ತು ಮತ್ತು ಸಶಕ್ತ ಅಂತರಾಷ್ಟ್ರೀಯ ಸಮುದಾಯದ ಬೆಂಬಲವಿತ್ತು. ಆದರೂ ಅವರಿಂದ ಆಗಿಲ್ಲ . ಸುಧಾರಣೆ ಪೂರ್ಣಗೊಳಿಸಲು ನಮಗೆ ಇನ್ನಷ್ಟು ಸಮಯದ ಅಗತ್ಯವಿದೆ ಎಂದರು.

ಅಫ್ಘಾನ್‌ನ ಸೆಂಟ್ರಲ್ ಬ್ಯಾಂಕ್ ದೇಶದ ಹೊರಗೆ ಹೊಂದಿರುವ ಸುಮಾರು 9 ಬಿಲಿಯನ್ ಡಾಲರ್ ಮೊತ್ತದ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧ  ತೆರವುಗೊಳಿಸುವಂತೆ ಆಗ್ರಹಿಸಿದ ಮುತ್ತಖಿ, ಇದನ್ನು ಹೊರತುಪಡಿಸಿಯೂ ಅಫ್ಘಾನ್‌ಗೆ ತೆರಿಗೆ, ಕಸ್ಟಮ್ಸ್ ತೆರಿಗೆ ಮತ್ತು ಕೃಷಿ ಆದಾಯಗಳಿವೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News