ರಶ್ಯದಲ್ಲಿ ಕೊರೋನ ಉಲ್ಬಣ: 1075 ಮಂದಿ ಮೃತ್ಯು

Update: 2021-10-24 11:25 GMT

ಮಾಸ್ಕೋ,ಅ.23: ರಶ್ಯದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದ್ದು ಕಳೆದ 24 ತಾಸುಗಳಲ್ಲಿ ಈ ಸೋಂಕಿನಿಂದಾಗಿ 1075 ಮಂದಿ ಸಾವನ್ನಪ್ಪಿದ್ದಾರೆ. ಸೋಂಕು ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಮುಂದಿನ ವಾರದಿಂದ ರಶ್ಯದಾದ್ಯಂತ ಹೊಸ ನಿರ್ಬಂಧಗಳು ಜಾರಿಗೆ ಬರಲಿದೆ.

ರಶ್ಯದಲ್ಲಿಲಸಿಕೆ ಹಾಕಿಸಿಕೊಳ್ಳುವವರ ಪ್ರಮಾಣ ತೀರಾ ಕಡಿಮೆಯಾಗಿದ್ದು, ಸ್ವದೇಶಿಯಾಗಿ ಅಭಿವೃದ್ಧಿ ಪಡಿಸಲಾಗಿರುವ ಸ್ಪುಟ್ನಿಕ್  ಸಿಕೆಯ ಲಭ್ಯತೆಯ ಹೊರತಾಗಿಯೂ ಕೇವಲ ಶೇ.36ರಷ್ಟು ರಶ್ಯನ್ನರು ಮಾತ್ರವೇ ಈವರೆಗೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಶನಿವಾರಂದು ರಶ್ಯದಲ್ಲಿ 37,678 ಕೋವಿಡ್-19ನ ಹೊಸ ಪ್ರಕರಣಗಳು ವರದಿಯಾಗಿದೆ. ಈವರೆಗೆ ರಶ್ಯದಲ್ಲಿ 2,29,529 ಮಂದಿ ಸಾವನ್ನಪ್ಪಿದ್ದು ಇದು ಯುರೋಪ್ ಖಂಡದಲ್ಲೇ ಅತ್ಯಧಿಕವಾಗಿದೆ.

ಕೋವಿಡ್19 ಸೋಂಕು ಮತ್ತೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 7ರ ವರೆಗೆ ಅಗತ್ಯ ಸೇವೆಗಳನ್ನು ಸ್ಥಗಿತಗೊಳಿಸಲು ರಶ್ಯ ನಿರ್ಧರಿಸಿದೆ. ಅಲ್ಲದೆ ಸೋಂಕು ನಿಯಂತ್ರಣಕ್ಕಾಗಿ ಆಕ್ಟೋಬರ್ 30ರಿಂದ ಆರಂಭಗೊಂಡು ರಾಷ್ಟ್ರವ್ಯಾಪಿಯಾಗಿ ವೇತನ ಪಾವತಿಯ ವಾರವನ್ನು ಘೋಷಿಸುವಂತೆಯೂ ಪುತಿನ್ ಆದೇಶಿಸಿದ್ದಾರೆ.

ರಶ್ಯದಲ್ಲಿ ಹೊಸತಾಗಿ ಕೋವಿಡ್ 19 ಸಾವಿನ ಪ್ರಮಾಣದಲ್ಲಿ ಏರಿಕೆಯಾಗಲು ಲಸಿಕೆ ಹಾಕಿಸಿಕೊಳ್ಳುವವರ ಪ್ರಮಾಣ ತೀರಾ ಕಡಿಮೆಯಾಗಿರುವುದೇ ಕಾರಣವೆಂದು ಪುತಿನ್ ಹೇಳಿದ್ದು, ರಶ್ಯನ್ನರು ಜವಾಬ್ದಾರಿಯುತವಾಗಿ ವರ್ತಿಸಿ ಲಸಿಕೆ ಪಡೆಯಬೇಕೆಂದು ಕರೆ ನೀಡಿದ್ದಾರೆ.

► ನ್ಯೂಝಿಲ್ಯಾಂಡ್ ನಲ್ಲಿ ಸೋಂಕು ಹೆಚ್ಚಳ

ನ್ಯೂಝಿಲ್ಯಾಂಡ್ ನಲ್ಲಿ ಶನಿವಾರ ಸಾಮುದಾಯಿಕ ಹರಡುವಿಕೆಯ ಪ್ರಕರಣ ಸೇರಿದಂತೆ ಕೊರೋನ ವೈರಸ್ ಸೋಂಕಿನ ಒಟ್ಟು 104 ಹೊಸ ಪ್ರಕಣಗಳು ವರದಿಯಾಗಿವೆ.

ಸೋಂಕಿನ ಬಹುತೇಕ ಪ್ರಕರಣಗಳು ಕಳೆದ ಎರಡು ತಿಂಗಳಿನಿಂದ ಕಟ್ಟುನಿಟ್ಟಿನ ಲಾಕ್ಡೌನ್ ಹೇರಿಕೆಯ ಹೊರತಾಗಿಯೂ ನ್ಯೂಝಿಲ್ಯಾಂಡ್ ನ ಅತಿ ದೊಡ್ಡ ನಗರವಾದ ಆಕ್ಲ್ಯಾಂಡ್ ನಲ್ಲಿ ವರದಿಯಾಗಿವೆ ಎಂದು ಮೂಲಗಳು ತಿಳಿಸಿವೆ

► ಬೀಜಿಂಗ್: ಕೋವಿಡ್ ಹಾವಳಿ; ಚೀನಾ ಕಟ್ಟುನಿಟ್ಟು

ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ಶನಿವಾರ ಕೊರೋನ ವೈರಸ್ ಸೋಂಕಿನ 9 ಪ್ರಕರಣಗಳು ವರದಿಯಾದ ಬೆನ್ನಲ್ಲೇ ಚೀನಾವು ಸೋಂಕು ತಪಾಸಣೆ ಕ್ರಮಗಳನ್ನು ಚುರುಕುಗೊಳಿಸಿದೆ ಹಾಗೂ ಹೊಟೇಲ್ ಗಳಲ್ಲಿ ಕೊಠಡಿಗಳ ಬುಕ್ಕಿಂಗ್ ಅನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ ಮತ್ತು ಸೋಂಕಿತರನ್ನು ಸಾಮುದಾಯಿಕವಾಗಿ ಪ್ರತ್ಯೇಕಿಸುವ ಕಾರ್ಯವನ್ನು ಪುನರಾರಂಭಿಸಿದೆ. ದೇಶದ ಇತರ ಭಾಗಗಳಲ್ಲಿಯೂ ಸೋಂಕಿನ 38 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News