ಸುಡಾನ್: ಕ್ಷಿಪ್ರಕ್ರಾಂತಿ ವಿರೋಧಿಸಿ ಬ್ರಹತ್ ಪ್ರತಿಭಟನಾ ರ್‍ಯಾಲಿ

Update: 2021-10-30 17:50 GMT

ಖರ್ಟೌಮ್, ಅ.30: ಸುಡಾನ್‌ನಲ್ಲಿ ಸೋಮವಾರ ಸೇನೆಯು ನಡೆಸಿದ ಕ್ಷಿಪ್ರಕ್ರಾಂತಿಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಿದ್ದು ಶನಿವಾರ ಮಿಲಿಯನ್ ಸ್ಟ್ರಾಂಗ್ ಮಾರ್ಚ್ (ಮಿಲಿಯನ್ ಜನರ ಬಲಿಷ್ಟ ಜಾಥಾ) ನಡೆಸಿ ಪ್ರತಿಭಟಿಸಲಾಗಿದೆ ಎಂದು ವರದಿಯಾಗಿದೆ.

 ನಮಗೆ ಮಿಲಿಟರಿಯ ಆಡಳಿತ ಬೇಕಿಲ್ಲ ಎಂಬ ಸಂದೇಶವನ್ನು ರವಾನಿಸುವುದು ನಮ್ಮ ಉದ್ದೇಶವಾಗಿದೆ. ಮಿಲಿಟರಿ ಪಡೆಗಳು ರಕ್ತಸಿಕ್ತವಾಗಿವೆ ಮತ್ತು ಅನ್ಯಾಯ ಎಸಗುತ್ತಿವೆ. ಪ್ರತಿಭಟನಾಕಾರರ ವಿರುದ್ಧ ಅವರು ಹೇಗೆ ವರ್ತಿಸುತ್ತಾರೆ ಎಂಬುದೂ ತಿಳಿದಿದೆ. ಆದರೆ ನಾವು ಹೆದರುವುದಿಲ್ಲ ಎಂದು ಪ್ರತಿಭಟನೆಯ ಆಯೋಜಕರಲ್ಲಿ ಒಬ್ಬರಾದ ಸುಡಾನ್‌ನ ಮಾನವ ಹಕ್ಕು ಹೋರಾಟಗಾರ್ತಿ

ತಹಾನಿ ಅಬ್ಬಾಸ್ ಹೇಳಿದ್ದಾರೆ.

ಈ ಮಧ್ಯೆ, ಪ್ರತಿಭಟನೆಯನ್ನು ಹತ್ತಿಕ್ಕಲು ವ್ಯಾಪಕ ಕ್ರಮ ಕೈಗೊಂಡಿದ್ದ ಸೇನಾಪಡೆ, ಶನಿವಾರ ಬೆಳಗ್ಗಿನಿಂದಲೇ ಎಲ್ಲಾ ಫೋನ್ ಸಂಪರ್ಕ ವ್ಯವಸ್ಥೆಯನ್ನು ಸ್ಥಗಿತಗೊಳಿಸಿತ್ತು. ರಾಜಧಾನಿಯನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಮುಖ್ಯ ರಸ್ತೆಯ ಹಲವೆಡೆ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿ ಾಹನಗಳ ತಪಾಸಣೆ ನಡೆಸಲಾಗಿದೆ.

ಹಲವಾರು ಪ್ರತಿಭಟನಾಕಾರರನ್ನು ಸೇನೆ ಬಂಧಿಸಿದೆ. ಅಲ್ಲದೆ 20ರಿಂದ 30ರಷ್ಟು ಪ್ರತಿಭಟನಾಕಾರರನ್ನು ಹತ್ಯೆ ಮಾಡಿರುವ ಮಾಹಿತಿಯಿದೆ. ಆದ್ದರಿಂದ ಪ್ರತಿಭಟನೆಯನ್ನು ಹಿಂಸೆಯ ಮೂಲಕ ಪ್ರತಿಬಂಧಿಸುವ ಪ್ರಯತ್ನಗಳನ್ನು ಕೈಬಿಟ್ಟು ಪ್ರತಿಭಟನೆ ನಡೆಸುವ ಪೌರರ ಹಕ್ಕುಗಳನ್ನು ಸೇನೆ ಗೌರವಿಸಬೇಕು ಎಂದು ಅಮೆರಿಕದ ಅಧಿಕಾರಿಗಳು ಆಗ್ರಹಿಸಿದ್ದಾರೆ.

ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದೆ. ಪ್ರತಿಭಟನಾಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸೇನೆ ಗೌರವಿಸಬೇಕು. ಪ್ರತಿಭಟನಾಕಾರರ ವಿರುದ್ಧ ನಡೆಯುವ ಯಾವುದೇ ಹಿಂಸಾಚಾರದ ಹೊಣೆಯನ್ನು ಭದ್ರತಾ ಪಡೆ ಮತ್ತದರ ಮುಖಂಡರು ಹೊರಬೇಕು ಎಂದು ಸುಡಾನ್ ಮತ್ತು ದಕ್ಷಿಣ ಸುಡಾನ್‌ಗೆ ಬ್ರಿಟನ್‌ನ ವಿಶೇಷ ಪ್ರತಿನಿಧಿ ರಾಬರ್ಟ್ ಫೇರ್‌ವೆದರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News