ಜಿ20 ಶೃಂಗಸಭೆ ನೇಪಥ್ಯದಲ್ಲಿ ವಿಶ್ವನಾಯಕರೊಂದಿಗೆ ಪ್ರಧಾನಿ ಮೋದಿ ಮಾತುಕತೆ

Update: 2021-10-30 18:05 GMT

ರೋಮ್, ಅ.30: ಇಟಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸಹಿತ ಹಲವು ಪ್ರಮುಖ ವಿಶ್ವಮುಖಂಡರೊಂದಿಗೆ ಸಂವಾದ ನಡೆಸಿದರು ಎಂದು ಪ್ರಧಾನಿಯವರ ಕಾರ್ಯಾಲಯ ಟ್ವೀಟ್ ಮಾಡಿದೆ. ಅಮೆರಿಕದ ಅಧ್ಯಕ್ಷ ಬೈಡನ್, ಫ್ರಾನ್ಸ್ ಪ್ರಧಾನಿ ಇಮ್ಯಾನುವೆಲ್ ಮಾಕ್ರನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊರೊಂದಿಗೆ ಮೋದಿ ಮಾತುಕತೆ ನಡೆಸುತ್ತಿರುವ ಫೋಟೊವನ್ನು ಕಾರ್ಯಾಲಯ ಟ್ವೀಟ್ ಮಾಡಿದೆ.

ವಿಶ್ವದ ಬೃಹತ್ ಆರ್ಥಿಕ ಶಕ್ತಿಗಳೊಂದಿಗೆ ಸಂವಹನ ಮತ್ತು ಮಾತುಕತೆ ನಡೆಸಲು ಭಾರತಕ್ಕೆ ಜಿ20 ಪ್ರಮುಖ ವೇದಿಕೆಯಾಗಿದೆ. ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಮಾಕ್ರನ್ ನಡುವೆ ಪರಸ್ಪರರಿಗೆ ಸಂಬಂಧಿಸಿದ ಹಾಗೂ ಜಾಗತಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಫಲದಾಯಕ ಮಾತುಕತೆ ನಡೆಯಿತು. ಉಭಯ ದೇಶಗಳ ಮಧ್ಯೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಸಂಬಂಧವಿದ್ದು ಇತರ ಹಲವು ಕ್ಷೇತ್ರಗಳಿಗೆ ದ್ವಿಪಕ್ಷೀಯ ಸಂಬಂಧವನ್ನು ವಿಸ್ತರಿಸುವ ಬಗ್ಗೆ ಚರ್ಚಿಸಲಾಗಿದೆ. ಈ ಸಂದರ್ಭ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶ ವ್ಯವಹಾರ ಸಚಿವ ಎಸ್. ಜೈಶಂಕರ್ ಪ್ರಧಾನಿಯ ಜತೆಗಿದ್ದರು ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ.

ಕಳೆದ ತಿಂಗಳು ಉಭಯ ಮುಖಂಡರ ಮಧ್ಯೆ ಟೆಲಿಫೋನ್ ಮೂಲಕ ನಡೆದ ಮಾತುಕತೆಯಲ್ಲಿ ಇಂಡೊ ಪೆಸಿಫಿಕ್ ವಲಯದ ಸ್ಥಿರತೆ ಕಾಯ್ದುಕೊಳ್ಳಲು ಮತ್ತು ಈ ವಲಯದಲ್ಲಿ ಅಧಿಪತ್ಯ ಸ್ಥಾಪನೆಯ ಪ್ರಯತ್ನವನ್ನು ವಿರೋಧಿಸಲು ಜಂಟಿಯಾಗಿ ಕಾರ್ಯನಿರ್ವಹಿಸಲು ಇಬ್ಬರೂ ಒಪ್ಪಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News