ನೈಜೀರಿಯಾ: ಕಟ್ಟಡ ಕುಸಿದು 3 ಮಂದಿ ಮೃತ್ಯು‌

Update: 2021-11-02 17:58 GMT

ಅಬುಜಾ, ನ.2: ನೈಜೀರಿಯಾದ ಬೃಹತ್ ನಗರ ಲಾಗೊಸ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ 21 ಮಹಡಿಗಳ ಅಪಾರ್ಟ್‌ಮೆಂಟ್ ಕಟ್ಟಡ ಕುಸಿದು ಬಿದ್ದು ಕನಿಷ್ಟ 3 ಮಂದಿ ಮೃತರಾಗಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋಮವಾರ ಬೆಳಿಗ್ಗೆ ಕಟ್ಟಡ ಕುಸಿದ ಸಂದರ್ಭ ಕಟ್ಟಡದೊಳಗೆ 100ಕ್ಕೂ ಹೆಚ್ಚು ಮಂದಿಯಿದ್ದರು. 3 ಮಂದಿ ಮೃತಪಟ್ಟಿದ್ದು ಕೆಲವರನ್ನು ರಕ್ಷಿಸಲಾಗಿದೆ. ಆದರೆ ಹಲವು ಮಂದಿ ಇನ್ನೂ ನಾಪತ್ತೆಯಾಗಿದ್ದು ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಮಧ್ಯೆ, ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿ ಆರಂಭವಾಗಿದೆ ಎಂದು ಸ್ಥಳೀಯರು ಭದ್ರತಾ ಪಡೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ. ಸಂಜೆಯ ವೇಳೆಗೆ ರಕ್ಷಣಾ ತಂಡ ಕುಸಿದು ಬಿದ್ದ ಕಟ್ಟಡದ ಅವಶೇಷಗಳಡಿಯಿಂದ 3 ಮಂದಿಯನ್ನು ರಕ್ಷಿಸಿದೆ. ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆಯಿದೆ ಎಂದು ಲಾಗೊಸ್‌ನ ಪೊಲೀಸ್ ಆಯುಕ್ತ ಹಕೀಮ್ ಒಡುಮೊಸು ಹೇಳಿದ್ದಾರೆ.

2 ವರ್ಷದಿಂದ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಖಾಸಗಿ ಗುತ್ತಿಗೆದಾರರ ಕಳಪೆ ಕಾಮಗಾರಿ ಕಟ್ಟಡ ಕುಸಿಯಲು ಕಾರಣವಾಗಿರಬಹುದು ಎಂದು ಸ್ಥಳೀಯರನ್ನು ಉಲ್ಲೇಖಿಸಿ ಮಾ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News