ಲಾಬಿ ಪ್ರಕರಣ ಬ್ರಿಟನ್ ಸರಕಾರದ ವಿರುದ್ಧ ವಿಪಕ್ಷಗಳ ಆಕ್ರೋಶ

Update: 2021-11-04 17:18 GMT

ಲಂಡನ್, ನ.3: ಲಾಬಿ (ಪ್ರಭಾವ ಬೀರುವುದು, ವಶೀಲಿಬಾಜಿ) ನಡೆಸುವುದಕ್ಕೆ ಸಂಬಂಧಿಸಿದ ನಿಯಮವನ್ನು ಉಲ್ಲಂಸಿದ ಸಂಸದ ಒವೆನ್ ಪ್ಯಾಟರ್ಸನ್‌ರನ್ನು ಬೆಂಬಲಿಸಿದ ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪ ಕೇಳಿ ಬಂದಿದೆ.

ಪ್ಯಾಟರ್ಸನ್‌ರನ್ನು ಸದನದಿಂದ 30 ದಿನ ಅಮಾನತುಗೊಳಿಸುವಂತೆ ಸಂಸತ್ತಿನ ‘ಕಾಮನ್ ಸ್ಟ್ಯಾಂಡರ್ಡ್ ಕಮಿಟಿ’ಯು ಶಿಫಾರಸು ಮಾಡಿದ್ದು ಇದರ ವಿರುದ್ಧವಾಗಿ ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್(ಬ್ರಿಟನ್ ಸಂಸತ್ತು)ನ 250 ಸದಸ್ಯರಲ್ಲಿ 232 ಸದಸ್ಯರು ಮತ ಹಾಕಿದ್ದಾರೆ.

ಪ್ಯಾಟರ್ಸನ್ ತನ್ನ ಪ್ರಭಾವವನ್ನು ಬಳಸಿಕೊಂಡು 2 ಸಂಸ್ಥೆಗಳಿಗೆ ಪ್ರಯೋಜನ ಮಾಡಿಕೊಟ್ಟಿದ್ದು ಇದಕ್ಕಾಗಿ ಅವರಿಗೆ ಸಂಸದನಾಗಿ ದೊರಕುವ ವಾರ್ಷಿಕ ವೇತನದ ಸುಮಾರು 3 ಪಟ್ಟಿನಷ್ಟು ಹಣ ಸಂದಾಯವಾಗಿದೆ. ಈ ಮೂಲಕ ಪ್ಯಾಟರ್ಸನ್ ಪಾವತಿ ವಕಾಲತ್ತಿನ ಪ್ರದರ್ಶ ಮಾಡಿದ್ದಾರೆ ಎಂದು ಸಮಿತಿ ಹೇಳಿದೆ.

ಆದರೆ ಅಮಾನತುಗೊಳಿಸುವುದನ್ನು ಅನುಮೋದಿಸುವ ಪ್ರಸ್ತಾವನೆಗೆ ಕನ್ಸರ್ವೇಟಿವ್ ಪಕ್ಷದ ಸಂಸದರು ನಿರಾಕರಿಸಿದ್ದು, ಅದರ ಬದಲು ಈ ಪ್ರಸ್ತಾವನೆಯನ್ನು ಮತ್ತೊಂದು ಸಮಿತಿಯ ಪರಿಶೀಲನೆಗೆ ವಹಿಸುವಂತೆ ಸೂಚಿಸಿದ್ದಾರೆ. ಸರಕಾರದ ಈ ಕ್ರಮದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷಗಳು, ಸರಕಾರ ಸಂಸದರ ಅಮಾನತಿಗೆ ಒಪ್ಪದ ಕಾರಣ ನಿಯಮದಲ್ಲಿ ಬದಲಾವಣೆ ಮಾಡಲಾಗುತ್ತಿದೆ . ಇದರಿಂದ ಜನತೆ ಸಂಸತ್ತಿನ ಮೇಲಿರಿಸಿದ ನಂಬಿಕೆ, ವಿಶ್ವಾಸಕ್ಕೆ ಘಾಸಿಯಾಗಲಿದೆ ಎಂದಿದ್ದಾರೆ.

 ಮತದಾನದ ಫಲಿತಾಂಶ ಓದಿ ಹೇಳುತ್ತಿದ್ದಂತೆಯೇ ವಿಪಕ್ಷ ಮುಖಂಡರು ‘ಶೇಮ್ ಶೇಮ್’ ಎಂದು ಘೋಷಣೆ ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News