ಚರ್ಚ್ ಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಪ್ರಾಯಶ್ಚಿತ್ತವಾಗಿ ಮಂಡಿಯೂರಿದ ಫ್ರಾನ್ಸ್ ಬಿಷಪ್

Update: 2021-11-07 18:16 GMT

ಪ್ಯಾರಿಸ್, ನ.7: ಚರ್ಚ್‌ಗಳಲ್ಲಿ ಹಲವು ದಶಕಗಳಿಂದ ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ವರದಿಯ ಹಿನ್ನೆಲೆಯಲ್ಲಿ ಇದಕ್ಕೆ ಪ್ರಾಯಶ್ಚಿತ್ತವಾಗಿ ಫ್ರಾನ್ಸ್‌ನ ಕ್ಯಾಥೊಲಿಕ್ ಧರ್ಮಪ್ರಾಂತ್ಯದ ಹಿರಿಯ ಸದಸ್ಯರಾದ ಬಿಷಪ್ ಲೂರ್ಡ್ಸ್‌ನ ಚರ್ಚ್‌ನಲ್ಲಿ ಮಂಡಿಯೂರಿದ್ದಾರೆ ಎಂದು ವರದಿಯಾಗಿದೆ.

ಲೂರ್ಡ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 120 ಆರ್ಚ್‌ಬಿಷಪ್‌ಗಳು, ಬಿಷಪ್‌ಗಳು ಹಾಗೂ ಜನಸಾಮಾನ್ಯರು ಪಾಲ್ಗೊಂಡಿದ್ದರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳನ್ನು ಸಂಕೇತಿಸುವ , ಅಳುತ್ತಿರುವ ಮಗುವಿನ ತಲೆ ಮಾತ್ರ ಕಾಣಿಸುವ ಒಂದು ಫೋಟೋವನ್ನು ಈ ಸಂದರ್ಭ ಚರ್ಚ್‌ನ ಗೋಡೆಯಲ್ಲಿ ಅನಾವರಣಗೊಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ, ಸಂತ್ರಸ್ತರ ಕೋರಿಕೆಯಂತೆ ಧರ್ಮಗುರುಗಳು ಧಾರ್ಮಿಕ ಹಿನ್ನೆಲೆಯ ದಿರಿಸುಗಳನ್ನು ತೊಟ್ಟಿರಲಿಲ್ಲ.

ಈ ಚಿತ್ರವು ಸಂತ್ರಸ್ತರಿಗೆ ಸ್ಮಾರಕ ರೂಪವಾಗಲಿದೆ. ಈ ಫೋಟೋವನ್ನು ಸಂತ್ರಸ್ತ ಬಾಲಕ ಚಿತ್ರೀಕರಿಸಿದ್ದು , ಈ ಬಾಲಕ ಅನುವಿಸಿದ ಚಿತ್ರಹಿಂಸೆಯನ್ನು ಕಾರ್ಯಕ್ರಮದಲ್ಲಿ ಮತ್ತೊಬ್ಬ ಸಂತ್ರಸ್ತ ಬಾಲಕ ಓದಿ ಹೇಳಿದ್ದಾನೆ. ಲೂರ್ಡ್ಸ್‌ನ ಈ ಸ್ಥಳವನ್ನು ಹಿಂಸೆ, ದೌರ್ಜನ್ಯ, ನಾಟಕ ಮತ್ತು ದಾಳಿಯನ್ನು ಸ್ಮರಿಸುವ ದೃಶ್ಯ ಸಾಕ್ಷ್ಯವಾಗಿ ರೂಪಿಸಲು ನಿರ್ಧರಿಸಿದ್ದೇವೆ ಎಂದು ಬಿಷಪರ ಸಮಾವೇಶದ ವಕ್ತಾರ ಹ್ಯೂಸ್ ವೊಲೆಮೆಂಟ್ ಹೇಳಿದ್ದಾರೆ.

ಚರ್ಚ್‌ಗಳಲ್ಲಿ ದಶಕದಿಂದ ನಡೆಯುತ್ತಿರುವ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತಮ್ಮ ಜವಾಬ್ದಾರಿಯನ್ನು ಬಿಷಪರು ಒಪ್ಪಿಕೊಂಡಿದ್ದರು. ಶನಿವಾರ ಪ್ಯಾರಿಸ್‌ನಲ್ಲಿ ನಡೆದಿದ್ದ ಬಿಷಪರ ವಾರ್ಷಿಕ ಸಮಾವೇಶದಲ್ಲಿ , ಸಾವಿರಾರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಕ್ಯಾಥೊಲಿಕ್ ಚರ್ಚ್‌ಗಳು ಸಾಂಸ್ಥಿಕ ಹೊಣೆಗಾರರಾಗಿವೆ ಎಂದು ಒಪ್ಪಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News