ಮ್ಯಾನ್ಮಾರ್: ಅಮೆರಿಕ ಪತ್ರಕರ್ತನ ವಿರುದ್ಧ ಭಯೋತ್ಪಾದನೆ, ದೇಶದ್ರೋಹ ಆರೋಪ

Update: 2021-11-10 16:17 GMT

ಯಾಂಗಾನ್, ನ.10: ಮ್ಯಾನ್ಮಾರ್ ನಲ್ಲಿ ಬಂಧನದಲ್ಲಿರುವ ಅಮೆರಿಕದ ಪತ್ರಕರ್ತ ಡ್ಯಾನಿ ಫೆನ್ಸ್ಟರ್ ವಿರುದ್ಧ ಭಯೋತ್ಪಾದನೆ ಮತ್ತು ದೇಶದ್ರೋಹದ ಆರೋಪ ದಾಖಲಿಸಲಾಗಿದ್ದು ಆರೋಪ ಸಾಬೀತಾದರೆ ಜೈಲು ಶಿಕ್ಷೆಗೆ ಗುರಿಯಾಗಬಹುದು ಎಂದು ವಕೀಲರು ಹೇಳಿದ್ದಾರೆ. ಮೇ ತಿಂಗಳಿನಲ್ಲಿ ಡ್ಯಾನಿ ಫೆನ್ಸ್ಟರ್ನನ್ನು ಮ್ಯಾನ್ಮಾರ್ನ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಈತನ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆ ಹಾಗೂ ಮ್ಯಾನ್ಮಾರ್ ದಂಡಸಂಹಿತೆಯಡಿ ಮತ್ತೆ 2 ಹೊಸ ಪ್ರಕರಣ ದಾಖಲಿಸಲಾಗಿದೆ. 

ಸರಕಾರದಿಂದ ಭಯೋತ್ಪಾದಕ ಸಂಘಟನೆಯೆಂದು ನಿಯೋಜಿತವಾಗಿರುವ ತಂಡಗಳೊಂದಿಗೆ ಸಂಪರ್ಕ ಹೊಂದಿರುವುದು ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಕ್ರಿಮಿನಲ್ ಕೃತ್ಯವಾಗಿದ್ದು ಈ ಅಪರಾಧಕ್ಕೆ 3ರಿಂದ 7 ವರ್ಷದವರೆಗಿನ ಜೈಲುಶಿಕ್ಷೆ ವಿಧಿಸಬಹುದಾಗಿದೆ. ಮ್ಯಾನ್ಮಾರ್ ದಂಡಸಂಹಿತೆಯಡಿನ ಪ್ರಕರಣ ದೇಶದ್ರೋಹಕ್ಕೆ ಸಂಬಂಧಿಸಿದ್ದು 7ರಿಂದ 20 ವರ್ಷದವರೆಗಿನ ಜೈಲುಶಿಕ್ಷೆ ವಿಧಿಸಬಹುದಾಗಿದೆ. 

ಅಮೆರಿಕದ ಹಿರಿಯ ರಾಜತಾಂತ್ರಿಕ ಪ್ರತಿನಿಧಿ ಹಾಗೂ ಸಂಧಾನಕಾರ ರಿಚರ್ಡ್ ಸನ್ ಯಾಂಗಾಂಗ್ಗೆ ಭೇಟಿ ನೀಡಿ ಸೇನಾ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದ ಕೆಲ ದಿನಗಳಲ್ಲೇ ಫೆನ್ಸ್ಟರ್ ವಿರುದ್ಧ ಹೊಸ ಆರೋಪ ದಾಖಲಿಸಲಾಗಿದೆ. ಯಾಂಗ್ಯಾನ್ ಮೂಲದ ಆನ್ಲೈನ್ ಪತ್ರಿಕೆ 'ಫ್ರಾಂಟಿಯರ್ ಮ್ಯಾನ್ಮಾರ್ನ' ವ್ಯವಸ್ಥಾಪಕ ಸಂಪಾದಕರಾಗಿರುವ 37 ವರ್ಷದ ಫೆನ್ಸ್ಟರ್ ವಿರುದ್ಧ ಸೇನೆಯ ವಿರುದ್ಧದ ಭಿನ್ನಾಭಿಪ್ರಾಯಕ್ಕೆ ಪ್ರೋತ್ಸಾಹ ನೀಡಿರುವುದು, ಅಕ್ರಮವಾಗಿ ಗುಂಪು ಸೇರಿಸಿರುವುದು ಹಾಗೂ ವಲಸೆ ಕಾನೂನನ್ನು ಉಲ್ಲಂಘಿಸಿರುವ 3 ಆರೋಪಗಳು ಈಗಾಗಲೇ ದಾಖಲಾಗಿವೆ. ಜತೆಗೆ ಹೊಸದಾಗಿ ಮತ್ತೆರಡು ಆರೋಪ ಹೊರಿಸಲಾಗಿದೆ. ಇವರ ವಿಚಾರಣೆ ಸಂದರ್ಭ ಮಾಧ್ಯಮದವರು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಿದ್ದು ನ್ಯಾಯಾಲಯದ ಕಲಾಪದ ಬಗ್ಗೆ ಅವರ ವಕೀಲರು ಮಾಹಿತಿ ನೀಡುತ್ತಿದ್ದಾರೆ. ವಿಚಾರಣೆ ಮುಂದುವರಿಯಲು ಸಾಕಷ್ಟು ಪುರಾವೆಗಳನ್ನು ಅರ್ಜಿದಾರರು ಒದಗಿಸಿದ್ದಾರೆ ಎಂದು ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಹೇಳಿದ್ದಾರೆ. ಬಂಧನದ ಸಂದರ್ಭದಲ್ಲೂ ಫೆನ್ಸ್ಟರ್ ಪತ್ರಿಕೆಗಾಗಿ ಕೆಲಸ ಮಾಡುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ ಎಂದು ಮ್ಯಾನ್ಮಾರ್ ಮಾಹಿತಿ ಸಚಿವಾಲಯ ಹೇಳಿದೆ. ಆದರೆ ಅವರು ಕಳೆದ ವರ್ಷದ ಜುಲೈಯಲ್ಲೇ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪತ್ರಿಕೆ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News