ಲಾಹೋರ್‌ನಲ್ಲಿ ಹೊಗೆಮಂಜು ಸಮಸ್ಯೆ ಉಲ್ಬಣ

Update: 2021-11-17 17:40 GMT
photo:twitter/@ndtvfeed

ಲಾಹೋರ್, ನ.17: ವಿಶ್ವದ ಅತ್ಯಂತ ಕಲುಷಿತ ನಗರ ಎಂದು ವಾಯು ಗುಣಮಟ್ಟದ ಪ್ರಮಾಣ ಅಂದಾಜಿಸುವ ಸಂಸ್ಥೆಯಿಂದ ಘೋಷಿಸಲ್ಪಟ್ಟಿರುವ ಪಾಕಿಸ್ತಾನದ ಲಾಹೋರ್‌ನಲ್ಲಿ ತೀಕ್ಷ್ಣ ಹೊಗೆಮಂಜು ಸಮಸ್ಯೆಯಿದ್ದು ತಕ್ಷಣ ಕ್ರಮ ಕೈಗೊಳ್ಳುವಂತೆ ನಗರದ ನಿವಾಸಿಗಳು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

 ಮಕ್ಕಳಿಗೆ ಉಸಿರಾಡಲು ಕಷ್ಟವಾಗುತ್ತಿದೆ. ಏನಾದರೂ ಪರಿಹಾರ ರೂಪಿಸಿ. ಇಲ್ಲಿನ ಬಹುತೇಕ ನಿವಾಸಿಗಳು ಬಡವರು. ನಮಗೆ ವೈದ್ಯರ ಶುಲ್ಕ ಭರಿಸಲೂ ಕಷ್ಟವಾಗುತ್ತದೆ. ಇದೇ ರೀತಿ ಮುಂದುವರಿದರೆ ನಾವೆಲ್ಲಾ ಸತ್ತುಹೋಗಬಹುದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ‘ಈ ಹಿಂದೆ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳುವಾಗ ಮಕ್ಕಳನ್ನೂ ಜತೆಗೆ ಕರೆದೊಯ್ಯುತ್ತಿದ್ದೆ.

ಆದರೆ ಈಗ ಅವರನ್ನು ಕರೆದೊಯ್ಯುವ ಧೈರ್ಯವಿಲ್ಲ. ಇಲ್ಲಿ ಕಾರ್ಖಾನೆಗಳು ಹಾಗೂ ಸಣ್ಣ ಉದ್ದಿಮೆಗಳು ಕಾರ್ಯಾಚರಿಸುತ್ತಿವೆ. ಇವುಗಳಿಗೆ ಪರಿಹಾರ ನೀಡಿ ಬೇರೆಡೆಗೆ ಸ್ಥಳಾಂತರಿಸಬೇಕು ಅಥವಾ ನೂತನ ತಂತ್ರಜ್ಞಾನದೊಂದಿಗೆ ಕಾರ್ಯ ನಿರ್ವಹಿಸಲು ವ್ಯವಸ್ಥೆ ಮಾಡಬೇಕು ’ ಎಂದು ಸ್ಥಳೀಯ ನಿವಾಸಿ ಸಯೀದ್ ಹೇಳಿದ್ದಾರೆ.

ವಾಯು ಗುಣಮಟ್ಟವನ್ನು ಪ್ರಮಾಣೀಕರಿಸುವ ಸ್ವಿಝರಲ್ಯಾಂಡಿನ ‘ಐಕ್ಯುಏರ್’ ಸಂಸ್ಥೆಯು ಲಾಹೋರ್‌ನ ವಾಯುಗುಣಮಟ್ಟಕ್ಕೆ 348ನೇ ಶ್ರೇಯಾಂಕ ನೀಡಿದೆ. 340ರ ಶ್ರೇಯಾಂಕ ಮೀರಿದರೆ ಅದು ಅಪಾಯಕರ ಮಟ್ಟವಾಗಿದೆ. ಭಾರತದ ಗಡಿಸಮೀಪದ ಪಂಜಾಬ್ ಪ್ರಾಂತದಲ್ಲಿರುವ ಲಾಹೋರ್ ನಗರ 11 ಮಿಲಿಯನ್‌ಗೂ ಅಧಿಕ ಜನಸಂಖ್ಯೆ ಹೊಂದಿದ್ದು, ಕಳಪೆ ವಾಯು ಗುಣಮಟ್ಟದ ನಗರಗಳ ಜಾಗತಿಕ ಪಟ್ಟಿಯಲ್ಲಿ ನಿರಂತರವಾಗಿ ಸ್ಥಾನ ಪಡೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ಇಲ್ಲಿನ ನಿವಾಸಿಗಳು ತಮ್ಮದೇ ವಾಯು ಶುದ್ಧೀಕರಣ ವ್ಯವಸ್ಥೆ ರೂಪಿಸಿಕೊಂಡಿದ್ದು, ವಾಯು ಗುಣಮಟ್ಟ ನಿಯಂತ್ರಿಸಲು ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ದಾವೆಯನ್ನೂ ಹೂಡಿದ್ದಾರೆ. ಆದರೆ , ದಿಲ್ಲಿಯಲ್ಲಿ ವಾಯು ಗುಣಮಟ್ಟ ಕುಸಿದಿರುವ ಪರಿಣಾಮ ಲಾಹೋರ್‌ನ ಮೇಲೆ ಆಗಿದೆ, ಅಥವಾ ಶ್ರೇಯಾಂಕ ಪಟ್ಟಿಯಲ್ಲಿ ಉತ್ಪ್ರೇಕ್ಷಿತ ಅಂಕಿಅಂಶ ನೀಡಲಾಗಿದೆ ಎಂದು ಹೇಳಿ ಅಧಿಕಾರಿಗಳು ಹೊಣೆಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News