ಚೀನಾದಲ್ಲಿ ನಡೆಯುವ ಅಫ್ಘಾನ್ ಕುರಿತ ಸಚಿವ ಮಟ್ಟದ ಸಭೆಗೆ ತಾಲಿಬಾನ್‌ಗೆ ಆಹ್ವಾನ

Update: 2021-11-17 17:57 GMT

ಇಸ್ಲಮಾಬಾದ್, ನ.17: ಚೀನಾದಲ್ಲಿ ಮುಂದಿನ ವರ್ಷಾರಂಭದಲ್ಲಿ ನಡೆಯುವ ಅಫ್ಘಾನಿಸ್ತಾನದ ಕುರಿತ 3ನೇ ಸಚಿವ ಮಟ್ಟದ ಸಭೆಗೆ ತಾಲಿಬಾನ್ ಸರಕಾರವನ್ನು ಆಹ್ವಾನಿಸಲಾಗುವುದು ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಖುರೇಶಿ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಯುದ್ಧ ಮುಗಿದಿದೆ ಮತ್ತು ತೀವ್ರವಾದಿ ಸಂಘಟನೆ ಅಲ್ಲಿ ಅಧಿಕಾರಕ್ಕೆ ಬಂದಿದೆ ಎಂಬ ವಾಸ್ತವವನ್ನು ಅಂತರಾಷ್ಟ್ರೀಯ ಸಮುದಾಯ ಅಂಗೀಕರಿಸಬೇಕು ಎಂದವರು ಆಗ್ರಹಿಸಿದ್ದಾರೆ. ಸಂಸತ್ತಿನ ವಿದೇಶ ವ್ಯವಹಾರ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು ‘ಯುದ್ಧದಿಂದ ಜರ್ಝರಿತಗೊಂಡ ಅಫ್ಘಾನಿಸ್ತಾದ ಅಭಿವೃದ್ಧಿಯ ವಿಷಯದಲ್ಲಿ ನೆರೆಯ ದೇಶಗಳೊಂದಿಗೆ ಸಮಾಲೋಚನೆಗೆ ನೂತನ ವ್ಯವಸ್ಥೆಯನ್ನು ಪಾಕಿಸ್ತಾನ ರೂಪಿಸಿದೆ.ಅಫ್ಘಾನಿಸ್ತಾನದ ನೆರೆ ದೇಶಗಳ ಸಭೆಗೆ ಅಫ್ಘಾನಿಸ್ತಾನದ ಹಂಗಾಮಿ ಸರಕಾರಕ್ಕೂ ಆಹ್ವಾನ ನೀಡಲಾಗುವುದು ’ ಎಂದರು.

ಈ ಸಭೆಯಲ್ಲಿ ಚೀನಾ, ಇರಾನ್, ಪಾಕಿಸ್ತಾನ, ತಜಿಕಿಸ್ತಾನ, ತುರ್ಕ್‌ಮೆನಿಸ್ತಾನ, ಉಜ್ಬೇಕಿಸ್ತಾನ ಹಾಗೂ ರಶ್ಯಾ ಪಾಲ್ಗೊಳ್ಳಲಿದೆ. ಈ 7 ದೇಶಗಳ ನಡುವಿನ ಮೊದಲ ಸಭೆ ಸೆಪ್ಟಂಬರ್ 8ರಂದು ಇಸ್ಲಮಾಬಾದ್‌ನಲ್ಲಿ, ಅಕ್ಟೋಬರ್ 27ರಂದು ಇರಾನ್‌ನಲ್ಲಿ ನಡೆದಿತ್ತು. ಈ ಎರಡೂ ಸಭೆಗೆ ತಾಲಿಬಾನ್‌ಗೆ ಆಹ್ವಾನ ಇರಲಿಲ್ಲ.

ಇತ್ತೀಚಿನ ದಿನಗಳಲ್ಲಿ ಹಲವು ದೇಶಗಳ ವಿದೇಶಿ ಸಚಿವರು ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದರು. ಇಸ್ಲಮಾಬಾದ್‌ನಲ್ಲಿ ಕಳೆದ ವಾರ ನಡೆದಿದ್ದ ‘ಟ್ರೋಯಿಕಾ ಪ್ಲಸ್’ ಸಭೆಯ ನೇಪಥ್ಯದಲ್ಲಿ ಚೀನಾ, ಪಾಕಿಸ್ತಾನ, ಅಮೆರಿಕ ಮತ್ತು ರಶ್ಯಾದ ಪ್ರತಿನಿಧಿಗಳು ಅಫ್ಗಾನಿಸ್ತಾನದ ವಿದೇಶ ವ್ಯವಹಾರ ಸಚಿವ ಅಮೀರ್‌ಖಾನ್ ಮುತ್ತಖಿ ಜತೆ ಮಾತುಕತೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News