×
Ad

ಧಾರ್ಮಿಕ ಸ್ವಾತಂತ್ರ್ಯಕ್ಕೆ ಆತಂಕದ ದೇಶಗಳ ಪಟ್ಟಿಯಿಂದ ನೈಜೀರಿಯಾ ಹೊರಕ್ಕೆ

Update: 2021-11-19 23:13 IST
photo:twitter

ವಾಷಿಂಗ್ಟನ್, ನ.19: ಧಾರ್ಮಿಕ ಸ್ವಾತಂತ್ರ್ಯಕ್ಕೆ ಆತಂಕ ಇರುವ ದೇಶಗಳ ಪಟ್ಟಿಯಿಂದ ನೈಜೀರಿಯಾವನ್ನು ಹೊರಗಿರಿಸಲಾಗಿದ್ದು ಇತರ 10 ದೇಶಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ವಿಶ್ವದಾದ್ಯಂತದ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಉಲ್ಲಂಘನೆಯ ಪ್ರಕರಣಗಳನ್ನು ಪರಿಶೀಲಿಸಿದ ಬಳಿಕ ಅಮೆರಿಕದ ವಿದೇಶಾಂಗ ಇಲಾಖೆ ಈ ಪಟ್ಟಿಯನ್ನು ಪ್ರತೀ ವರ್ಷ ಸಿದ್ಧಪಡಿಸುತ್ತದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿನ ಅಮೆರಿಕದ ಆಯೋಗ (ಯುಎಸ್‌ಸಿಐಆರ್‌ಎಫ್) ಮೌಲ್ಯಮಾಪನ ನಡೆಸಿ ನೀಡುವ ವರದಿಯನ್ನು ಆಧರಿಸಿ ಈ ಪಟ್ಟಿ ರೂಪಿಸಲಾಗುತ್ತದೆ.

ತಾನು ಶಿಫಾರಸು ಮಾಡಿದ್ದರೂ ನೈಜೀರಿಯಾವನ್ನು ಹೊರಗಿರಿಸಿರುವುದರಿಂದ ಆಘಾತವಾಗಿದೆ . ಭಾರತ, ಸಿರಿಯಾ ಮತ್ತು ವಿಯೆಟ್ನಾಮ್ ಅನ್ನು ಹೊರಗಿರಿಸಿದ್ದೂ ಸರಿಯಲ್ಲ ಎಂದು ಯುಎಸ್‌ಸಿಐಆರ್‌ಎಫ್ ಪ್ರತಿಕ್ರಿಯಿಸಿದೆ.

ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗಾಗಿ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ನಿಯೋಜಿತಗೊಳ್ಳುವ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳನ್ನು ಗುರುತಿಸುವ ಜವಾಬ್ದಾರಿ ಅಮೆರಿಕದ ವಿದೇಶಾಂಗ ಇಲಾಖೆಯದ್ದಾಗಿರುತ್ತದೆ ಎಂದು ಅಮೆರಿಕ ಅಧ್ಯಕ್ಷ ಬೈಡನ್ ಹೇಳಿದ್ದಾರೆ. ಈ ಪಟ್ಟಿಗೆ ಸೇರುವ ದೇಶಗಳ ವಿರುದ್ಧ ಅಮೆರಿಕ ನಿರ್ಬಂಧ ಹೇರುವ ಅನಿವಾರ್ಯತೆಯಿಲ್ಲ. ಆದರೆ, ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಪ್ರಕರಣದ ವಿರುದ್ಧ ಸರಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕದ ಕಾನೂನು ಹೇಳುತ್ತದೆ.

ಮ್ಯಾನ್ಮಾರ್, ಚೀನಾ, ಎರಿಟ್ರಿಯಾ, ಇರಾನ್, ಉತ್ತರ ಕೊರಿಯಾ, ಪಾಕಿಸ್ತಾನ, ರಶ್ಯಾ, ಸೌದಿ ಅರೆಬಿಯಾ, ತಜಿಕಿಸ್ತಾನ ಮತ್ತು ತುರ್ಕ್‌ಮೆನಿಸ್ತಾನಗಳನ್ನು ಧಾರ್ಮಿಕ ಸ್ವಾತಂತ್ರ್ಯಕ್ಕೆ ಆತಂಕ ಇರುವ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ದೇಶಗಳಲ್ಲಿ ವ್ಯವಸ್ಥಿತ ಮತ್ತು ಅತಿರೇಕದ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಪ್ರಕರಣ ರದಿಯಾಗಿದೆ ಎಂದು ಅಮೆರಿಕ ಹೇಳಿದೆ.

ಪಟ್ಟಿಯಲ್ಲಿರುವ 10 ದೇಶಗಳ ಜತೆಗೆ, ಅಲ್ಜೀರಿಯಾ, ಕೊಮೊರೊಸ್, ಕ್ಯೂಬಾ ಮತ್ತು ನಿಕರಾಗುವಾ ದೇಶಗಳನ್ನು ವಿಶೇಷ ಪಟ್ಟಿಯಲ್ಲಿ ಸೇರಿಸಲಾಗಿದೆ. ಜತೆಗೆ ಸಶಸ್ತ್ರ ಸಂಘಟನೆಗಳಾದ ಅಲ್-ಶದಬ್, ಬೊಕೊ ಹರಾಮ್, ಹಯತ್ ತಹ್ರೀರ್ ಅಲ್-ಶಮ್, ಹೌದೀಸ್, ಐಸಿಸ್, ಐಸಿಸ್-ಗ್ರೇಟರ್ ಸಹಾರಾ, ಐಸಿಸ್-ಪಶ್ಚಿಮ ಆಫ್ರಿಕಾ, ಜಮಾತ್-ನಸರಲ್ ಇಸ್ಲಾಮ್ ವಲ್ ಮುಸ್ಲಿಮಿನ್ ಹಾಗೂ ಅಫ್ಗಾನ್ ತಾಲಿಬಾನ್‌ಗಳನ್ನು ‘ತೀವ್ರ ಆತಂಕದ ಸಂಘಟನೆಗಳು’ ಪಟ್ಟಿಗೆ ಸೆೀರಿಸಲಾಗಿದೆ.

► ಪಟ್ಟಿಯಿಂದ ಹೊರಗುಳಿದ ಭಾರತ, ಸಿರಿಯಾ

ಯುಎಸ್‌ಸಿಐಆರ್‌ಎಫ್ ಶಿಫಾರಸು ಮಾಡುವ ದೇಶಗಳನ್ನು ಅಮೆರಿಕದ ವಿದೇಶಾಂಗ ಇಲಾಖೆ ಪಟ್ಟಿಗೆ ಸೇರ್ಪಡೆಗೊಳಿಸಲೇ ಬೇಕು ಎಂಬ ನಿಯಮವಿಲ್ಲ. ಭಾರತ, ಸಿರಿಯಾ, ನೈಜೀರಿಯಾ ಮತ್ತು ವಿಯೆಟ್ನಾಮ್ ಈ ವರ್ಷ ಶಿಫಾರಸು ಮಾಡಲಾಗಿದ್ದರೂ ಪಟ್ಟಿಯಿಂದ ಹೊರಗುಳಿದ ದೇಶಗಳಾಗಿವೆ. ವಿಶೇಷ ಪಟ್ಟಿಗೆ ಅಫ್ಘಾನಿಸ್ತಾನ, ಟರ್ಕಿ, ಈಜಿಪ್ಟ್, ಇರಾಕ್‌ಗಳನ್ನು ಶಿಫಾರಸು ಮಾಡಲಾಗಿದ್ದರೂ ಈ ದೇಶಗಳೂ ಅಂತಿಮ ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News