ಯುಎಇಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸುಧೀರ್‌ ಚೌಧರಿಗೆ ನೀಡಿದ್ದ ಆಹ್ವಾನ ವಾಪಸ್‌ ಪಡೆದಿಲ್ಲ

Update: 2021-11-22 18:22 GMT
Photo: Scroll.in

ಅಬುಧಾಬಿ: ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟೆರ್ಡ್‌ ಅಕೌಂಟಂಟ್‌ ಆಫ್‌ ಇಂಡಿಯಾ, ಅಬುಧಾಬಿ ಸಂಸ್ಥೆಯು ತಮ್ಮ ಕಾರ್ಯಕ್ರಮಕ್ಕೆ ಝೀ ನ್ಯೂಸ್‌ ನ ಪ್ರಧಾನ ಸಂಪಾದಕ ಹಾಗೂ ಕೋಮು ವಿದ್ವೇಷಿ ನಿರೂಪಕನೆಂಬ ಕುಖ್ಯಾತಿಗೆ ಪಾತ್ರರಾಗಿರುವ ಸುಧೀರ್‌ ಚೌಧರಿಯನ್ನು ಆಹ್ವಾನಿಸಿದ್ದು ವಿವಾದಕ್ಕೀಡಾಗಿತ್ತು. ಬಳಿಕ ಈ ಕುರಿತು ಸಾಮಾಜಿಕ ತಾಣದಾದ್ಯಂತ ಆಕ್ರೋಶ ವ್ಯಕ್ತವಾದ ಹಾಗೂ ಹಲವು ಮನವಿಗಳ ಮೇರೆಗೆ ಅವರನ್ನು ಕಾರ್ಯಕ್ರಮದಿಂದ ಕೈಬಿಡಲಾಗಿತ್ತು ಎಂಬ ಸುದ್ದಿಗಳೂ ಹರಿದಾಡಿದ್ದವು. ಆದರೆ ಸುಧೀರ್‌ ಚೌಧರಿಯನ್ನು ಕಾರ್ಯಕ್ರಮದಿಂದ ಕೈಬಿಡಲಾಗಿಲ್ಲ ಎಂದು ಅಧಿಕೃತ ಮೂಲಗಳಿಂದ ವಾರ್ತಾಭಾರತಿಗೆ ತಿಳಿದು ಬಂದಿದೆ.

ಮೊದಲಿಗೆ ಯುಇಯ ಅಲ್‌ ಖಾಸಿಮಿ ರಾಜಮನೆತನದ ರಾಜಕುಮಾರಿ ಶೈಖಾ ಹಿಂದ್‌ ಬಿಂತ್‌ ಫೈಸಲ್‌ ಈ ಕಾರ್ಯಕ್ರಮಕ್ಕೆ ʼಭಯೋತ್ಪಾದಕʼನನ್ನು ಏಕೆ ಆಹ್ವಾನಿಸುತ್ತಿದ್ದೀರಿ? ಎಂದು ಸಂಘಟಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸುಧೀರ್‌ ಚೌಧರಿ ಓರ್ವ ಕೋಮುದ್ವೇಷ ಕಾರುವ ನಿರೂಪಕ ಹಾಗೂ ಮುಸ್ಲಿಮರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎನ್ನುವುದನ್ನೂ ಶೈಖಾ ಬೆಟ್ಟು ಮಾಡಿದ್ದರು. ಇಂತಹಾ ವ್ಯಕ್ತಿಯನ್ನು ನನ್ನ ಶಾಂತಿಯುತ ದೇಶಕ್ಕೆ ಏಕೆ ಆಹ್ವಾನಿಸುತ್ತಿದ್ದೀರಿ? ಎಂದೂ ಅವರು ಪ್ರಶ್ನಿಸಿದ್ದರು. 

ಬಳಿಕ ಸಂಸ್ಥೆಯ ಕಾರ್ಯಕ್ರಮಕ್ಕೆ ಸುಧೀರ್‌ ಚೌಧರಿಯನ್ನು ಆಹ್ವಾನಿಸಿದ್ದನ್ನು ವಿರೋಧಿಸಿ, ಅವರನ್ನು ಕಾರ್ಯಕ್ರಮದಿಂದ ಕೈಬಿಡಬೇಕೆಂದು ಆಗ್ರಹಿಸಿ ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟೆರ್ಡ್‌ ಅಕೌಂಟಂಟ್‌ ಆಫ್‌ ಇಂಡಿಯಾ, ಅಬುಧಾಬಿ ಸಂಸ್ಥೆಯ ಸದಸ್ಯರು ಮುಖ್ಯಸ್ಥರಿಗೆ ಪತ್ರ ಬರೆದಿದ್ದರು. "ಸುಧೀರ್‌ ಚೌಧರಿ ಓರ್ವ ಖ್ಯಾತ ವ್ಯಕ್ತಿಯಾಗಿದ್ದರೂ, ಇಸ್ಲಾಮೋಫೋಬಿಯಾ ಬಿತ್ತುವ, ಕೋಮುದ್ವೇಷ ಕಾರುವ, ಸುಳ್ಳುಸುದ್ದಿಗಳನ್ನು ಬಿತ್ತರಿಸುವ ವ್ಯಕ್ತಿಯೂ ಆಗಿದ್ದಾರೆ. ಇಂತಹಾ ಪ್ರತಿಷ್ಠಿತ ಸಂಸ್ಥೆಯ ಕಾರ್ಯಕ್ರಮಕ್ಕೆ ಕಳಂಕಿತ ವ್ಯಕ್ತಿಗಳನ್ನು ಆಹ್ವಾನಿಸಬಹುದೇ?" ಎಂದು ಪತ್ರದಲ್ಲಿ ಪ್ರಶ್ನಿಸಲಾಗಿತ್ತು ಹಾಗೂ ಅವರನ್ನು ಕಾರ್ಯಕ್ರಮದಿಂದ ಕೈಬಿಡುವಂತೆ ಕೋರಲಾಗಿತ್ತು.

ಈ ಪತ್ರವನ್ನು ಟ್ವಿಟರ್‌ ನಲ್ಲಿ ಪ್ರಕಟಿಸಿದ್ದ ರಾಜಕುಮಾರಿ ಶೈಖಾ ಹಿಂದ್‌ ಬಿಂತ್‌ ಫೈಸಲ್‌ ಅಲ್‌ ಖಾಸಿಮಿ "ಸುಧೀರ್‌ ಚೌಧರಿಯನ್ನು ಕಾರ್ಯಕ್ರಮದಿಂದ ಕೈಬಿಡಲಾಗಿದೆ" ಎಂದು ಟ್ವಿಟರ್‌ ನಲ್ಲಿ ಪ್ರಕಟಿಸಿದ್ದರು. ಆದರೆ ಅದೇ ಟ್ವೀಟ್‌ ಗೆ ಪ್ರತಿಕ್ರಿಯಿಸಿದ್ದ ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟಂಟ್‌ ಆಫ್‌ ಇಂಡಿಯಾ, ಅಬುಧಾಬಿಯ ಸದಸ್ಯ ಹಾಗೂ ಅಬುಧಾಬಿಯಲ್ಲಿ ಚಾರ್ಟರ್ಡ್‌ ಅಕೌಂಟಂಟ್‌ ಆಗಿರುವ ಮಂಗಳೂರು ಮೂಲದ ಅಬ್ದುಲ್ಲಾ ಮಾದುಮೂಲೆ, "ನಾವು ಕಾರ್ಯಕ್ರಮದ ಸಂಘಟಕರನ್ನು ಈ ಕುರಿತು ಭೇಟಿಯಾಗಿ ಮನವಿ ಮಾಡಿದರೂ ಕೊನೆಯ ಕ್ಷಣದಲ್ಲಿ ಹಿಂದೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಖಲೀಜ್‌ ಟೈಮ್ಸ್‌ ಮಾತ್ರ ಜಾಹೀರಾತು ಪ್ರಕಟಿಸುವಾಗ ಸುಧೀರ್‌ ಚೌಧರಿ ಹೆಸರು ಕೈಬಿಟ್ಟಿದೆ" ಎಂದು ಹೇಳಿದ್ದಾರೆ.

ಬಳಿಕ ವಾರ್ತಾಭಾರತಿ ಅವರನ್ನು ಸಂಪರ್ಕಿಸಿದ್ದು, "ಕಾರ್ಯಕ್ರಮದಿಂದ ಸುಧೀರ್‌ ಚೌಧರಿಯನ್ನು ಕೈಬಿಡುವಂತೆ ಆಗ್ರಹಿಸಿ ನಾವು ಸಂಘಟಕರನ್ನು ಭೇಟಿಯಾಗಿ ಪತ್ರದ ಮೂಲಕ ಮನವಿ ಸಲ್ಲಿಸಿದ್ದೆವು. ಈ ಕುರಿತು ಸಂಸ್ಥೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರೊಂದಿಗೆ ಮಾತುಕತೆಯನ್ನೂ ನಡೆಸಿದ್ದೆವು. ಆದರೆ ಕೊನೆಯ ಕ್ಷಣದಲ್ಲಿ ಇದನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಹಾಗಾಗಿ ಗುರುವಾರ ನಡೆಯುವ ಕಾರ್ಯಕ್ರಮದಲ್ಲಿ ಸುಧೀರ್‌ ಚೌಧರಿ ಭಾಗವಹಿಸಲಿದ್ದಾರೆ" ಎಂದು ಖಚಿತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News