ಶ್ರೀಲಂಕಾ: ಚರ್ಚ್ ನಲ್ಲಿ ಬಾಂಬ್ ಸ್ಫೋಟ ಪ್ರಕರಣ; ಮಾಜಿ ಪೊಲೀಸ್ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ

Update: 2021-11-22 18:46 GMT

ಕೊಲಂಬೊ, ನ.22: ಶ್ರೀಲಂಕಾದ ಸೈಂಟ್ ಸೆಬಾಸ್ಟಿಯನ್ಸ್ ಚರ್ಚ್ನಲ್ಲಿ 2019ರಲ್ಲಿ ಸಂಭವಿಸಿದ್ದ ಸರಣಿ ಬಾಂಬ್ದಾಳಿಯ ಬಗ್ಗೆ ಗುಪ್ತಚರ ಪಡೆಯಿಂದ ಪೂರ್ವ ಮಾಹಿತಿ ಸಿಕ್ಕಿದ್ದರೂ ಸಕಾಲಿಕ ಕ್ರಮ ಕೈಗೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಮಾಜಿ ಪೊಲೀಸ್ ಮುಖ್ಯಸ್ಥ ಪೂಜಿತ್ ಜಯಸುಂದರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ನೆಗೋಂಬೊ ನಗರದಲ್ಲಿರುವ ಸೆಬಾಸಿಯನ್ಸ್ ಚರ್ಚ್‌ನಲ್ಲಿ  ಈಸ್ಟರ್ ಸಂಡೇ ಹಬ್ಬದ ಸಂದರ್ಭ ಸರಣಿ ಬಾಂಬ್ ಸ್ಫೋಟಿಸಿ 11 ಭಾರತೀಯರ ಸಹಿತ 270 ಮಂದಿ ಮೃತರಾಗಿದ್ದರು. ಈ ಪ್ರಕರಣದಲ್ಲಿ 1,200 ಸಾಕ್ಷಿಗಳಿದ್ದು ಪೊಲೀಸ್ ಮಹಾನಿರ್ದೇಶಕ ಜಯಸುಂದರ ವಿರುದ್ಧ ಕರ್ತವ್ಯಲೋಪ , ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ 855 ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಓದಿ ಹೇಳುವಾಗ ಜಯಸುಂದರ ಹಾಜರಿದ್ದರು. ಸ್ಫೋಟ ಸಂಭವಿಸಿದ ಸಂದರ್ಭ ರಕ್ಷಣಾ ಕಾರ್ಯದರ್ಶಿಯಾಗಿದ್ದ ಹೇಮಸಿರಿ ಫೆರ್ನಾಂಡೋ ವಿರುದ್ಧವೂ ಇದೇ ರೀತಿಯ ಪ್ರಕರಣ ದಾಖಲಾಗಿದೆ ಎಂದು ವಕೀಲರು ಹೇಳಿದ್ದಾರೆ. 

ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಿ ಬಂಧಿಸಲಾಗಿತ್ತು. ಬಳಿಕ ಇಬ್ಬರೂ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಐಸಿಸ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ನ್ಯಾಷನಲ್ ತೌಹೀದ್ ಜಮಾತ್(ಎನ್‌ಟಿಜೆ)ನ 9 ಆತ್ಮಹತ್ಯಾ ಬಾಂಬರ್‌ ಗಳು 3 ಚರ್ಚ್‌ಗಳು ಹಾಗೂ 3 ಐಷಾರಾಮಿ ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ಸರಣಿ ಬಾಂಬ್ ದಾಳಿಯಲ್ಲಿ 270 ಮಂದಿ ಮೃತಪಟ್ಟು 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News