ಸ್ವೀಡನ್‌ನ ಪ್ರಥಮ ಮಹಿಳಾ ಪ್ರಧಾನಿಯಾಗಿ ಮ್ಯಾಗ್ದಲಿನಾ ಆ್ಯಂಡರ್ಸನ್ ಆಯ್ಕೆ

Update: 2021-11-25 05:06 GMT
photo:twitter/AFP

ಸ್ಟಾಕ್‌ಹೋಂ, ನ.24: ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಮುಖಂಡೆ ಹಾಗೂ ಹಾಲಿ ವಿತ್ತಸಚಿವೆ ಮ್ಯಾಗ್ದಲಿನಾ ಆ್ಯಂಡರ್ಸನ್ ಸ್ವೀಡನ್‌ನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದು, ಇದರೊಂದಿಗೆ ದೇಶದ ಪ್ರಪ್ರಥಮ ಮಹಿಳಾ ಪ್ರಧಾನಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಮ್ಯಾಗ್ದಲಿನಾ ಪರ ಸಂಸತ್ತಿನ 117 ಸದಸ್ಯರು ಮತ ಹಾಕಿದರೆ, 174 ಸದಸ್ಯರು ಅವರ ವಿರುದ್ಧ ಮತ ಚಲಾಯಿಸಿದರು. 57 ಸದಸ್ಯರು ಮತದಾನದಿಂದ ದೂರವುಳಿದಿದ್ದು ಓರ್ವ ಸದಸ್ಯ ಗೈರಾಗಿದ್ದರು. ಸ್ವೀಡನ್‌ನ ಕಾನೂನಿನ ಪ್ರಕಾರ, ಪ್ರಧಾನಿ ಹುದ್ದೆಯ ಅಭ್ಯರ್ಥಿಗೆ ಸಂಸತ್ತಿನಲ್ಲಿ ಬಹುಮತದ ಬೆಂಬಲದ ಅಗತ್ಯವಿಲ್ಲ. ಆದರೆ ಅವರ ವಿರುದ್ಧ 175 ಮತ (ಒಟ್ಟು ಸಂಸತ್ ಸದಸ್ಯರ ಸಂಖ್ಯೆ 350, ಅದರಲ್ಲಿ 50%) ಚಲಾವಣೆಯಾಗಬಾರದು. ಹೀಗೆ 1 ಮತದ ಅಂತರದಿಂದ ಮ್ಯಾಗ್ದಲಿನಾ ಗೆಲುವು ಸಾಧಿಸಿದರು.

ಈ ತಿಂಗಳು ಸೋಷಿಯಲ್ ಡೆಮೊಕ್ರಾಟ್ಸ್ ಪಕ್ಷದ ನಾಯಕಿಯಾಗಿ ಆಯ್ಕೆಗೊಂಡಿದ್ದ ಮ್ಯಾಗ್ದಲಿನಾ, ಮಂಗಳವಾರ , ಪೆನ್ಷನ್ ಹಣ ಹೆಚ್ಚಿಸುವ ಭರವಸೆ ನೀಡಿ ಎಡಪಕ್ಷಗಳ ಬೆಂಬಲ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದು ಬುಧವಾರ ನಡೆದ ಮತದಾನದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಇದಕ್ಕೂ ಮುನ್ನ ಸೋಷಿಯಲ್ ಡೆಮೊಕ್ರಾಟ್ಸ್ ಪಕ್ಷದ ಮಿತ್ರರಾದ ಗ್ರೀನ್ಸ್ ಪಕ್ಷ ಹಾಗೂ ಸೆಂಟರ್ ಪಕ್ಷ ಅವರಿಗೆ ಬೆಂಬಲ ಘೋಷಿಸಿತ್ತು. ಪ್ರಧಾನಿಯಾಗಿ ಮ್ಯಾಗ್ದಲಿನಾಗೆ ಬೆಂಬಲ ನೀಡಿದರೂ, ಬುಧವಾರ ನಡೆಯಲಿರುವ ಬಜೆಟ್ ಮಂಡನೆ ಸಂದರ್ಭ ಸರಕಾರವನ್ನು ಬೆಂಬಲಿಸುವುದಿಲ್ಲ . ಎಡಪಕ್ಷಗಳಿಗೆ ಕೆಲವೊಂದು ಭರವಸೆ ನೀಡಿರುವುದಕ್ಕೆ ತಮ್ಮ ವಿರೋಧವಿದೆ ಎಂದು ಸೆಂಟರ್ ಪಕ್ಷ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News