ಕಾಬೂಲ್ ವಿಮಾನನಿಲ್ದಾಣದ ನಿರ್ವಹಣೆ: ಯುಇಎ-ತಾಲಿಬಾನ್ ಮಾತುಕತೆ

Update: 2021-11-24 18:21 GMT

ದುಬೈ, ನ.24: ಕಾಬೂಲ್ ವಿಮಾನ ನಿಲ್ದಾಣದ ನಿರ್ವಹಣೆಯ ಬಗ್ಗೆ ಆಸಕ್ತಿ ಹೊಂದಿರುವ ಯುಎಇ ಈ ವಿಷಯದಲ್ಲಿ ತಾಲಿಬಾನ್‌ನೊಂದಿಗೆ ಮಾತುಕತೆ ನಡೆಸಿದೆ. ಅಫ್ಘಾನಿಸ್ತಾನದ ನೂತನ ಆಡಳಿತದ ಮೇಲೆ ಖತರ್ ಹೊಂದಿರುವ ರಾಜತಾಂತ್ರಿಕ ಪ್ರಭಾವವನ್ನು ಕಡಿಮೆಗೊಳಿಸುವ ಉದ್ದೇಶ ಇದರ ಹಿಂದಿದೆ ಎಂದು ಮೂಲಗಳು ಹೇಳಿವೆ. ಅಫ್ಘಾನ್‌ನ ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವ ಕಾಬೂಲ್ ವಿಮಾನ ನಿಲ್ದಾಣದ ನಿರ್ವಹಣೆಯ ವಿಷಯದಲ್ಲಿ ಯುಎಇ ಅಧಿಕಾರಿಗಳು ಹಾಗೂ ತಾಲಿಬಾನ್ ನಡುವೆ ಸರಣಿ ಸಭೆ ನಡೆದಿದೆ .

ಈ ಸಂದರ್ಭ ತಾಲಿಬಾನ್ ಯುಎಇಯಿಂದ ಆರ್ಥಿಕ ನೆರವು ಕೋರಿದೆ ಎಂದು ಕೊಲ್ಲಿ ಮೂಲದ ವಿದೇಶಿ ರಾಜತಂತ್ರಜ್ಞರನ್ನು ಉಲ್ಲೇಖಿಸಿ ‘ ರಾಯ್ಟರ್ಸ್’   ವರದಿ ಮಾಡಿದೆ. ತಾಲಿಬಾನ್ ನೇತೃತ್ವದ ಸರಕಾರಕ್ಕೆ ಇದುವರೆಗೆ ಯಾವುದೇ ರಾಷ್ಟ್ರಗಳೂ ಅಧಿಕೃತವಾಗಿ ಮಾನ್ಯತೆ ನೀಡದಿದ್ದರೂ, ಇತರ ದೇಶಗಳು ಅಫ್ಘಾನ್ ಆಡಳಿತದ ಮೇಲೆ ತಮ್ಮ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವುದಕ್ಕೆ ಇಂತಹ ಮಾತುಕತೆಗಳು ಉತ್ತಮ ನಿದರ್ಶನವಾಗಿದೆ. ಅಫ್ಘಾನ್‌ನಲ್ಲಿ ಖತರ್ ಹೊಂದಿರುವ ರಾಜತಾಂತ್ರಿಕ ಪ್ರಭಾವಕ್ಕೆ ಟಕ್ಕರ್ ನೀಡಲು ಯುಎಇ ಬಯಸಿದೆ ಎಂದು ಪತ್ರಿಕೆಯ ವರದಿ ಹೇಳಿದೆ.

ಈ ಹಿಂದೆ ಅಫ್ಘಾನ್‌ನಲ್ಲಿ ಅಮೆರಿಕ ಬೆಂಬಲಿತ ಸರಕಾರವಿದ್ದಾಗ ಕಾಬೂಲ್ ನಿಲ್ದಾಣದ ಕಾರ್ಯನಿರ್ವಹಣೆಯ ಹೊಣೆ ನಿರ್ವಹಿಸಿದ್ದ ಯುಇಎ, ಈಗಲೂ ಮಾನವೀಯ ನೆರವಿನ ಪ್ರಕ್ರಿಯೆಗೆ ನೆರವಾಗಲು ಹಾಗೂ ಕಾಬೂಲ್ ವಿಮಾನ ನಿಲ್ದಾಣದ ಕಾರ್ಯನಿರ್ವಹಣೆ ಸುಗಮವಾಗಿ ಸಾಗುವ ನಿಟ್ಟಿನಲ್ಲಿ ನೆರವಾಗಲು ಸಿದ್ಧವಿದೆ ಎಂದು ಯುಎಇ ವಿದೇಶ ವ್ಯವಹಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕದ ಪಡೆಗಳು ಹಾಗೂ ವಿದೇಶೀಯರ ತೆರವು ಕಾರ್ಯಾಚರಣೆ ಅವ್ಯವಸ್ಥೆಯಿಂದ ಗೊಂದಲದ ಗೂಡಾಗಿ ಪರಿಣಮಿಸಿದಾಗ, ತೆರವು ಕಾರ್ಯಾಚರಣೆ ಸುಸೂತ್ರವಾಗಿ ಮುಂದುವರಿಯಲು ಖತರ್ ಪ್ರಮುಖ ಪಾತ್ರ ವಹಿಸಿತ್ತು.

ಅಲ್ಲದೆ ಅಫ್ಘಾನ್‌ನ ಹಮೀದ್ ಕರ್ಝಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಟರ್ಕಿ ದೇಶದ ನೆರವಿನೊಂದಿಗೆ ನಿರ್ವಹಿಸುತ್ತಿದೆ. ಆದರೆ, ಇದುವರೆಗೂ ಖತರ್‌ನೊಂದಿಗೆ ತಾಲಿಬಾನ್‌ಗಳು ಯಾವುದೇ ಅಧಿಕೃತ ಒಪ್ಪಂದ ಮಾಡಿಕೊಂಡಿಲ್ಲ ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News