ತೈವಾನ್ ವಿಷಯದಲ್ಲಿ ರಾಜಿಯ ಮಾತೇ ಇಲ್ಲ ಅಮೆರಿಕಕ್ಕೆ ಸ್ಪಷ್ಟಪಡಿಸಿದ ಚೀನಾ

Update: 2021-11-25 18:12 GMT

ಬೀಜಿಂಗ್, ನ.25: ತೈವಾನ್‌ನ ವಿಷಯಕ್ಕೆ ಸಂಬಂಧಿಸಿ ತನ್ನ ನಿಲುವು ಸ್ಪಷ್ಟವಾಗಿದ್ದು ಈ ಬಗ್ಗೆ ಅಮೆರಿಕದೊಂದಿಗೆ ರಾಜಿಯ ಮಾತೇ ಇಲ್ಲ ಎಂದು ಚೀನಾದ ರಕ್ಷಣಾ ಇಲಾಖೆ ಅಮೆರಿಕಕ್ಕೆ ತಿಳಿಸಿದೆ.

ಗುರುವಾರ ಸುದ್ಧಿಗೋಷ್ಟಿಯಲ್ಲಿ ಅಮೆರಿಕ-ಚೀನಾ ಸಂಬಂಧದ ಕುರಿತು ಎದುರಾದ ಪ್ರಶ್ನೆಗೆ ಉತ್ತರಿಸಿದ ಚೀನಾದ ರಕ್ಷಣಾ ಇಲಾಖೆಯ ವಕ್ತಾರ ವು ಕ್ವಿಯಾನ್, ಆರೋಗ್ಯಕರ ಹಾಗೂ ಸ್ಥಿರ ಸಂಬಂಧದಿಂದ ಉಭಯ ದೇಶಗಳಿಗೂ ಲಾಭವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಮೆರಿಕದ ಕಡೆಯಿಂದ ಹಲವಾರು ಬೇಜವಾಬ್ದಾರಿಯ, ತೈವಾನ್ ಕುರಿತ ವಿಷಯ, ದಕ್ಷಿಣ ಚೀನಾಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಚೋದಿಸುವ ವರ್ತನೆ, ಯುದ್ಧನೌಕೆ ಹಾಗೂ ಯುದ್ಧವಿಮಾನಗಳ ಮೂಲಕ ಬೇಹುಗಾರಿಕೆ ನಡೆಸುತ್ತಿರುವುದು ಕಂಡುಬಂದಿದೆ. ಚೀನಾದ ಸಾರ್ವಭೌಮತೆಯ ಕೆಲವೊಂದು ವಿಷಯಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ನಿರ್ಧಿಷ್ಟವಾಗಿ ತೈವಾನ್ ವಿಷಯದಲ್ಲಿ ಹೊಂದಾಣಿಕೆಗೆ ಚೀನಾ ಎಂದಿಗೂ ಅವಕಾಶ ನೀಡದು ಮತ್ತು ಈ ಬಗ್ಗೆ ಅಮೆರಿಕಕ್ಕೆ ಯಾವುದೇ ಭ್ರಮೆ ಬೇಡ ಎಂದರು.

ಅಮೆರಿಕ ನೇತೃತ್ವದಲ್ಲಿ ನಡೆಯಲಿರುವ ಪ್ರಜಾಪ್ರಭುತ್ವದ ಶೃಂಗಸಭೆಗೆ ತೈವಾನ್‌ಗೆ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಚೀನಾ ಈ ಕಟು ಹೇಳಿಕೆ ನೀಡಿದೆ. ತೈವಾನ್ ವಿಷಯಕ್ಕೆ ಸಂಬಂಧಿಸಿ ಅಮೆರಿಕ ಕಾರ್ಯತಂತ್ರದ ಅಸ್ಪಷ್ಟ ನಿಲುವು ವ್ಯಕ್ತಪಡಿಸುತ್ತಿದ್ದು , ಆರ್ಥಿಕ ಹಾಗೂ ಸೇನಾ ನೆರವು ಒದಗಿಸುವ ಜತೆಗೆ ತೈವಾನ್ ಪ್ರಜಾಪ್ರಭುತ್ವದ ದಾರಿದೀಪ ಎಂದು ಶ್ಲಾಘಿಸುತ್ತಿದೆ.

ತೈವಾನ್ ವಿರುದ್ಧ ಬಲಪ್ರಯೋಗಕ್ಕೂ ಸಿದ್ಧ ಎಂದು ಈಗಾಗಲೇ ಹೇಳಿರುವ ಚೀನಾ, ತೈವಾನ್‌ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧ ಬೆಳೆಸಿಕೊಳ್ಳದಂತೆ ಇತರ ದೇಶಗಳ ಮೇಲೆ ಒತ್ತಡ ಹೇರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News