ಲಿಬಿಯಾ ಜನತೆಯ ವಿರುದ್ಧ ತಾನೆಸಗಿದ ಪ್ರಮಾದವನ್ನು ಸರಿಪಡಿಸುವುದು ವಿಶ್ವಸಂಸ್ಥೆಯ ನೈತಿಕ ಹೊಣೆ: ಲಿಬಿಯಾ ರಾಯಭಾರಿ

Update: 2021-11-25 18:22 GMT

ನ್ಯೂಯಾರ್ಕ್ , ನ.25: ಲಿಬಿಯಾದ ಜನತೆಯ ವಿರುದ್ಧ ಈ ಹಿಂದೆ ಎಸಗಿದ್ದ ಪ್ರಮಾದವನ್ನು ಸರಿಪಡಿಸುವುದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನೈತಿಕ ಹೊಣೆಯಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಲಿಬಿಯಾ ರಾಯಭಾರಿ ತಾಹೆರ್ ಎಲ್ಸೋನಿ ಹೇಳಿದ್ದು ದೇಶದ ಆಂತರಿಕ ವ್ಯವಹಾರದಲ್ಲಿ ವಿದೇಶಿಂ ಹಸ್ತಕ್ಷೇಪ ಕೊನೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಬುಧವಾರ ನಡೆದ ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಲಿಬಿಯಾದಲ್ಲಿ ಆಗಿರುವ ಬೆಳವಣಿಗೆಯಲ್ಲಿ ತಮ್ಮ ಪಾತ್ರದ ಬಗ್ಗೆ ಭದ್ರತಾ ಸಮಿತಿಯ ಸದಸ್ಯರು ಅರಿತುಕೊಳ್ಳಬೇಕು ಎಂದರು. ಲಿಬಿಯಾದ ಜನತೆ ಈ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲಿದ್ದಾರೆ ಮತ್ತು ನಾವು ಇನ್ನಷ್ಟು ಬಲಿಷ್ಟವಾಗಿ ಹೊರಹೊಮ್ಮಲಿದ್ದೇವೆ ಎಂದವರು ಹೇಳಿದ್ದಾರೆ. ಲಿಬಿಯಾದ ಆಸ್ತಿಗಳನ್ನು ರಾಜಕೀಯ ಕಾರಣಕ್ಕಾಗಿ ಕೆಲವು ದೇಶಗಳು ಸ್ಥಂಭನಗೊಳಿಸಿದ್ದು ಬೆಲ್ಜಿಯಂ ಸ್ಥಂಬನಗೊಳಿಸಿದ ನಿಧಿಯನ್ನು ಅಕ್ರಮವಾಗಿ ವಿನಿಯೋಗಿಸಿದೆ ಎಂದವರು ಆರೋಪಿಸಿದ್ದಾರೆ.

ಮುಂದಿನ ಡಿಸೆಂಬರ್‌ನಲ್ಲಿ ಲಿಬಿಯಾದಲ್ಲಿ ನಡೆಯುವ ಚುನಾವಣೆಗೆ ಲಿಬಿಯಾದ ಅಧಿಕಾರಿಗಳು ಬೆಂಬಲ ನೀಡಬೇಕು ಮತ್ತು ಅಲ್ಲಿನ ಬಂಧನ ಕೇಂದ್ರದಲ್ಲಿರುವ ವಲಸಿಗರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ವರದಿಯ ಬಗ್ಗೆ ಗಮನ ಹರಿಸಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಸಮಿತಿ ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು. ಚುನಾವಣೆ ಮುಕ್ತ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ನಡೆಯಲಿದೆ ಎಂದು ಆಶಿಸಿದ ಸದಸ್ಯರು, ಲಿಬಿಯಾದ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮ ವಿವಾದ, ಭಿನ್ನಾಭಿಪ್ರಾಯಗಳನ್ನು ನ್ಯಾಯಸಮ್ಮತ ರೀತಿಯಲ್ಲಿ ಬಗೆಹರಿಸಬೇಕು ಮತ್ತು ಚುನಾವಣೆಗೆ ಅಡ್ಡಿಪಡಿಸಬಾರದು ಎಂದು ಒತ್ತಾಯಿಸಿದರು.

ವಿದೇಶದ ಸೇನೆ ಹಾಗೂ ಬಾಡಿಗೆ ಹೋರಾಟಗಾರರು ಲಿಬಿಯಾದಿಂದ ಹೊರ ತೆರಳಿರುವ ಕ್ರಮ ಶ್ಲಾಘನೀಯ. ಆದರೆ, ಬಂಧನ ಕೇಂದ್ರದಲ್ಲಿರುವ ವಲಸಿಗರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ವರದಿ ಹೆಚ್ಚುತ್ತಿರುವುದು ಆತಂಕದ ವಿಷಯ ಎಂದು ಸಮಿತಿ ಸದಸ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News